ಕೊರೊನಾ ನಿಯಂತ್ರಣಕ್ಕೆ ನಿಷೇಧಾಜ್ಞೆಯೇ ಪರಿಹಾರವೇ? | ಸರ್ಕಾರದ ಬಳಿ ಪರ್ಯಾಯ ಕ್ರಮ ಇಲ್ಲವೇ? - Mahanayaka
8:02 PM Thursday 12 - December 2024

ಕೊರೊನಾ ನಿಯಂತ್ರಣಕ್ಕೆ ನಿಷೇಧಾಜ್ಞೆಯೇ ಪರಿಹಾರವೇ? | ಸರ್ಕಾರದ ಬಳಿ ಪರ್ಯಾಯ ಕ್ರಮ ಇಲ್ಲವೇ?

yediyurappa
30/03/2021

ಮಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹರಡಿರುವ ವಿಚಾರವಾಗಿ ಸರ್ಕಾರ ಸಭೆ ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ ಹೇರಿದೆ. ಇದೇ ಸಂದರ್ಭದಲ್ಲಿ ಶಾಲಾ ಕಾಲೇಜುಗಳನ್ನು ತೆರೆದಿದೆ. ಶಾಲಾ ಕಾಲೇಜುಗಳಲ್ಲಿ ಹರಡದ ಕೊರೊನಾ ಸಮಾರಂಭಗಳಲ್ಲಿ ಹರಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಸದ್ಯ ಕೇಳಿ ಬಂದಿದೆ.

ಶಾಲಾ, ಕಾಲೇಜುಗಳಲ್ಲಿ, ಬಸ್ ಗಳಲ್ಲಿ, ಮಾರ್ಕೆಟ್ ಗಳಲ್ಲಿ, ಮಾಲ್ ಗಳಲ್ಲಿ, ವಿವಿಧ ಸೂಪರ್ ಮಾರ್ಕೆಟ್ ಗಳಲ್ಲಿ, ಹೊಟೇಲ್ ಗಳಲ್ಲಿ ಜನರು ಸೇರುತ್ತಿದ್ದಾರೆ. ಚುನಾವಣಾ ಪ್ರಚಾರ ಕಾರ್ಯಕ್ರಮಗಳು ನಡೆಯುತ್ತಿವೆ ಆದರೆ, ಧಾರ್ಮಿಕ ಕಾರ್ಯಕ್ರಮಗಳು, ಪ್ರತಿಭಟನೆಗಳು,  ಹಬ್ಬಗಳ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಂದ ಕೊರೊನಾ ಹರಡುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಸರ್ಕಾರದ ನಿರ್ಧಾರದಿಂದಾಗಿ ಜನರು ಸಂತಸದಿಂದ ಆಚರಿಸುವ ಹಬ್ಬಗಳಿಂದ ವಂಚಿತರಾಗುತ್ತಿದ್ದಾರೆ. ಸಂತಸದ ದಿನಗಳು ಇಲ್ಲದ ಕಾರಣ ಖಿನ್ನತೆಗೆ ಜಾರುತ್ತಿದ್ದಾರೆ ಎಂದು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಶಾಲಾ ಕಾಲೇಜು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹೇಗೆ ಕೊವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಜನರು ಭಾಗವಹಿಸುತ್ತಿದ್ದಾರೋ ಹಾಗೆಯೇ ಹಬ್ಬಗಳಲ್ಲಿ, ಜಾತ್ರೆಗಳಲ್ಲಿ ಕೂಡ ಅದೇ ರೀತಿಯ ನಿಯಮಗಳನ್ನು ಜಾರಿ ಮಾಡಿ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ.

ಈಗಾಗಲೇ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕೊರೊನಾ ಮಾರ್ಗ ಸೂಚಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಜನರಲ್ಲಿ ಹಲವು ಅನುಮಾನಗಳು ಮೂಡಿವೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ, ಸಂಚರಿಸಬಹುದು, ಕೊವಿಡ್ ಮಾರ್ಗ ಸೂಚಿಗಳನ್ನು ಪಾಲಿಸಿ ವ್ಯವಹರಿಸಬಹುದಾದರೆ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಹಬ್ಬಗಳು ಇರುವ ಸಂದರ್ಭದಲ್ಲಿಯೇ ಈ ನಿಷೇಧಾಜ್ಞೆ ಸರಿಯೇ? ಈ ಕ್ರಮದಿಂದ ಮಾತ್ರವೇ ಕೊವಿಡ್ ನಿಯಂತ್ರಣ ಸಾಧ್ಯವೇ? ಕಾರ್ಯಕ್ರಮಗಳಲ್ಲಿ ಹರಡುವ ಕೊರೊನಾ ಸಾರ್ವಜನಿಕ ಪ್ರದೇಶಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಹರಡದೇ ಇರುತ್ತದೆಯೇ? ಎನ್ನುವ ಹಲವು ಚರ್ಚೆಗಳು ಸಾರ್ವಜನಿಕವಾಗಿ ಕೇಳಿ ಬಂದಿದೆ. ಈ ಬಗ್ಗೆ ಸರ್ಕಾರ ಗಮನಿಸಬೇಕಾದ ಅಗತ್ಯ ಇದೆ.

ಜನರು ಕೊರೊನಾ ಭೀತಿಯಿಂದ ಹೊರ ಬರುತ್ತಿದ್ದಾರೆ. ಕೊರೊನಾದ ಜೊತೆಗೆ ಬದುಕೋಣ ಎನ್ನುವ ಘೋಷಣೆಯೊಂದಿಗೆ ಹಿಂದಿನ ಲಾಕ್ ಡೌನ್ ನ್ನು ಸರ್ಕಾರ ತೆರೆದಿತ್ತು. ಆದರೆ, ಕೊರೊನಾ ಲಸಿಕೆ ಬಂದಿದೆ, ಜನರು ಮಾಸ್ಕ್ ಧರಿಸುವ ಗಂಭೀರತೆಯನ್ನು ಅರಿತುಕೊಂಡಿದ್ದಾರೆ. ಇವೆಲ್ಲ ನಡೆದ ಬಳಿಕವೂ ಸರ್ಕಾರ ನಿಷೇಧಾಜ್ಞೆಗಳನ್ನೇ ಬಳಸಿ ಕೊರೊನಾ ನಿಯಂತ್ರಣ ಕ್ರಮ ಎಂದು ಹೇಳುತ್ತಿದೆ. ಈ ಬಗ್ಗೆ ಸರ್ಕಾರ ಮತ್ತೊಮ್ಮೆ ಚಿಂತಿಸಬೇಕಿದೆ. ಹಬ್ಬ ಹರಿದಿನಗಳು ಇಲ್ಲದೇ ಜನರ ಸಂತಸವನ್ನು, ಆಚರಣೆಗಳನ್ನು ಪದೇ ಪದೇ ಕಿತ್ತುಕೊಳ್ಳುವುದು ಸರಿಯಾದ ಕ್ರಮವಲ್ಲ ಎನ್ನುವ ಅಭಿಪ್ರಾಯಗಳು ಸದ್ಯ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ