ಮಾನಗೆಟ್ಟವರು, ಕಾಮುಕರು ಬಿಲದಿಂದ ಹೊರಬರುತ್ತಿದ್ದಾರೆ | ನಾ ದಿವಾಕರ - Mahanayaka
4:36 AM Thursday 14 - November 2024

ಮಾನಗೆಟ್ಟವರು, ಕಾಮುಕರು ಬಿಲದಿಂದ ಹೊರಬರುತ್ತಿದ್ದಾರೆ | ನಾ ದಿವಾಕರ

03/03/2021

ರಾಜಕಾರಣವನ್ನು ಸ್ವಚ್ಚಗೊಳಿಸದ ಹೊರತು ಈ ದೇಶ ಊರ್ಜಿತವಾಗುವುದಿಲ್ಲ. ಪಕ್ಷಾಂತರಿಗಳು ಮಾನ್ಯತೆ ಪಡೆದಿದ್ದಾಯಿತು. ಭ್ರಷ್ಟಾಚಾರಿಗಳು ಉನ್ನತ ಸ್ಥಾನಮಾನ ಗಳಿಸಿದ್ದಾಯಿತು. ಅಪರಾಧಿಗಳು ಅಧಿಕಾರ ಪೀಠಗಳನ್ನು ಅಲಂಕರಿಸಿದ್ದಾಯಿತು. ಕೊಲೆಗಡುಕರು, ದೊಂಬಿಕೋರರು, ಗಲಭೆಕೋರರು, ಥಳಿತ ತಜ್ಞರು, ಹಂತಕರು, ವಂಚಕರು ಶಾಸನಸಭೆಗಳಿಗೆ ಪ್ರವೇಶಿಸಿದ್ದಾಯಿತು. ಈಗ ಅತ್ಯಾಚಾರಿಗಳು, ಮಾನಗೆಟ್ಟವರು, ಕಾಮುಕರು, ನಡತೆಗೆಟ್ಟವರು ಬಿಲದಿಂದ ಹೊರಬರುತ್ತಿದ್ದಾರೆ. ಹೆಣ್ಣು ಈ ಕುಟಿಲ ರಾಜಕಾರಣಕ್ಕೆ ಅಸ್ತ್ರವಾಗಿ ಬಳಕೆಯಾಗುತ್ತಿದ್ದಾಳೆ. ಹೆಣ್ತನಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲೂ ಗೌರವ, ಮಾನ್ಯತೆ ದೊರೆಯುತ್ತಿಲ್ಲ. ಸುದ್ದಿಮನೆಗಳಿಗೆ ರಾಜಕೀಯ ನಾಯಕರ ಲಜ್ಜೆಗೆಟ್ಟ ನಡತೆಗಿಂತಲೂ, ಒಂದು ಹೆಣ್ಣಿನ ಸುತ್ತ ಹೆಣೆಯುವ ರೋಚಕ ಕತೆ ಲಾಭದಾಯಕವಾಗಿ ಕಾಣುತ್ತದೆ. ಅಶ್ಲೀಲತೆ ಸಿ ಡಿಗಳಲ್ಲಿ‌ ಇಲ್ಲ. ಪುರುಷ ರಾಜಕಾರಣಿಗಳಲ್ಲಿದೆ. ರಾಜಕೀಯ ವೈಷಮ್ಯಕ್ಕೆ ಅಶ್ಲೀಲತೆ ಬತ್ತಳಿಕೆಯಾದರೆ, ಹೆಣ್ಣು ಅಸ್ತ್ರವಾಗುತ್ತಾಳೆ. ಈ ಲಜ್ಜೆಗೆಟ್ಟ ರಾಜಕಾರಣವನ್ನು ದಿನವಿಡೀ ರೋಚಕವಾಗಿ ಬಿತ್ತರಿಸುವ ಸುದ್ದಿಮನೆಗಳ ಸಂಪಾದಕರು ಮಾನಗೆಟ್ಟವರಂತೆ ಕಂಡರೆ ಅಚ್ಚರಿಯೇನಿಲ್ಲ.

ಈ ಹೊಲಸು ರಾಡಿಯನ್ನು ಸಂಪೂರ್ಣ ತೊಳೆದುಹಾಕಿ ಸ್ವಚ್ಚ ರಾಜಕಾರಣಕ್ಕಾಗಿ ಪ್ರಯತ್ನಿಸುವ ಒಂದೇ ಒಂದು ಧ್ವನಿ , ದೆಹಲಿಯಿಂದ ಬೆಂಗಳೂರಿನವರೆಗೆ ಎಲ್ಲಿಯೂ ಕೇಳಿಬರುತ್ತಿಲ್ಲ. ಅಂದರೆ ಅಧಿಕಾರ ರಾಜಕಾರಣ ಎಷ್ಟು ಹೊಲಸನ್ನಾದರೂ ಬಗಲಲ್ಲಿಟ್ಟುಕೊಂಡು ನಡೆಯಲು ಸಜ್ಜಾಗಿದೆ ಎಂದರ್ಥ ಅಲ್ಲವೇ ? ಅಧಿಕಾರದ ಅಮಲು ಅಮೇಧ್ಯವನ್ನೂ ರುಚಿಕರವಾಗಿಸುತ್ತದೆ ಎನ್ನುವುದನ್ನು ಭಾರತದ ರಾಜಕಾರಣ ನಿರೂಪಿಸಿಬಿಟ್ಟಿದೆ. ಅತ್ಯಾಚಾರ ಎಸಗಿದವನನ್ನೇ ವಿವಾಹವಾಗುವೆಯಾ ಎಂದು ನ್ಯಾಯಾಲಯ ಕೇಳುತ್ತದೆ. ಇತ್ತ ವಿಧಾನಸಭೆಯ ಕಟ್ಟಡದಲ್ಲಿ ಅಕ್ರಮ ಚಟುವಟಿಕೆ ನಡೆಸಿದರೂ, ಕಲಾಪದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದರೂ ಅಂಥವರನ್ನು ನಮ್ಮ ಪಕ್ಷಕ್ಕೆ ಬರುವೆಯಾ ಎಂದು ಪಕ್ಷಗಳು ಕೇಳುತ್ತವೆ. ಕೆಲ ಸಮಯದ ನಂತರ ಆ ಹೆಣ್ಣಿನ ಸುತ್ತ ಕತೆಗಳು ಹೆಣೆದುಕೊಳ್ಳುತ್ತಾ ಹೋಗುತ್ತವೆ‌. ಈ ಸಿಕ್ಕುಗಳ ನಡುವೆಯೇ ಅಪರಾಧಿ ಸುರಕ್ಷಿತವಾಗಿ ಯಾವುದೋ ಅಧಿಕಾರ ಪೀಠ ಅಲಂಕರಿಸಿರುತ್ತಾನೆ.

ಅಪರಾಧ ಮುಕ್ತ ರಾಜಕಾರಣ ಅಥವಾ ಅಪರಾಧಿ ಮುಕ್ತ ಪಕ್ಷ ರಾಜಕಾರಣ ಯಾವ ಪಕ್ಷವೂ ಬಯಸದ ಆಶಯಗಳು (ಕೊಂಚಮಟ್ಟಿಗೆ ಎಡಪಕ್ಷಗಳನ್ನು ಹೊರತುಪಡಿಸಿ). ಭಾರತ ಎಲ್ಲಿಂದ ಎಲ್ಲಿಗೆ ಜಾರುತ್ತಿದೆ ? ಇನ್ನೆಷ್ಟು ಅಧೋಗತಿಗೆ ಇಳಿಯಲು ಸಾಧ್ಯ ? ನೈತಿಕತೆ, ಮೌಲ್ಯ ಮತ್ತು ಸಭ್ಯತೆಯ ಎಲ್ಲ ಮಿತಿಗಳನ್ನೂ ಮೀರಿ ರಾಜಕೀಯ ನಾಯಕರು ತಮ್ಮ ಮಾತುಗಳ‌ ಮೂಲಕ, ಕೃತಿಯ ಮೂಲಕ, ನಡವಳಿಕೆಯ ಮೂಲಕ, ಚಟುವಟಿಕೆಗಳ ಮೂಲಕ ಅಧಃಪತನದ ಹಾದಿಯಲ್ಲಿ ಸಾಗುತ್ತಲೇ ಇದ್ದಾರೆ. ಇಂಥವರು ಬೆರಳೆಣಿಕೆಯಷ್ಟಿದ್ದಾರಷ್ಟೇ ಎಂದು ಹೇಳುವ ಮುನ್ನ ಇಂಥವರನ್ನು ಸಹಿಸಿಕೊಳ್ಳುವ ಪಕ್ಷಗಳು, ನಾಯಕರು ಹೇರಳವಾಗಿರುವುದನ್ನು ಮರೆಯಕೂಡದು ಅಲ್ಲವೇ ?

ದೇಶದ ಜನಸಾಮಾನ್ಯರ ನೋವಿಗೆ ಸ್ಪಂದಿಸುವವರು ಈ ದೇಶದಲ್ಲಿ ರಾಜದ್ರೋಹದ ಆರೋಪಕ್ಕೆ ಗುರಿಯಾಗುತ್ತಾರೆ. ಸಾಂವಿಧಾನಿಕ ಮೌಲ್ಯ ಮತ್ತು ರಾಜಕೀಯ ಸಭ್ಯತೆ, ಸೌಜನ್ಯವನ್ನೇ ಮರೆತು ವರ್ತಿಸುವವರು ರಾಜ್ಯಭಾರ ನಡೆಸುತ್ತಾರೆ. ಇದು ದುರಂತ ಅಲ್ಲವೇ ? ಊಳಿಗಮಾನ್ಯ ಧೋರಣೆ ಈ ದೇಶದ ರಾಜಕಾರಣವನ್ನು, ರಾಜಕಾರಣಿಗಳನ್ನು ಹೇಗೆ ಆವರಿಸಿದೆ ನೋಡಿ. King can do no wrong, ದೊರೆ ಯಾವುದೇ ತಪ್ಪು ಮಾಡುವುದಿಲ್ಲ ಎನ್ನುವ ಊಳಿಗಮಾನ್ಯ ಧೋರಣೆಯೇ ಶಾಸನಸಭೆಯ ಪಾವಿತ್ರ್ಯತೆಯನ್ನು ಹರಾಜು ಹಾಕಿಬಿಟ್ಟಿದೆ. ನೈತಿಕತೆ, ಸಭ್ಯತೆ, ಸೌಜನ್ಯ, ಸಚ್ಚಾರಿತ್ರ್ಯ, ಪೂರ್ಣ ಪ್ರಾಮಾಣಿಕತೆ, ಸತ್ಯಸಂಧತೆ, ಪಾರದರ್ಶಕತೆ ಮತ್ತು ಮಾನವೀಯ ಮೌಲ್ಯಗಳು, ಈ ಎಲ್ಲ ಗುಣಗಳನ್ನು ಜನಪ್ರತಿನಿಧಿಗಳಾಗಲು ಮಾನದಂಡಗಳೆಂದು ಪರಿಗಣಿಸಿಬಿಟ್ಟರೆ ಭಾರತದ ಶಾಸನಸಭೆಗಳು ಬಹುತೇಕ ಖಾಲಿಯಾಗಿಬಿಡುತ್ತದೆ. ಇಂತಹ ವಿಷಮ ಸಂದರ್ಭದಲ್ಲಿ ನಾವು ನವ ಭಾರತದ ಕನಸು ಕಾಣುತ್ತಿದ್ದೇವೆ. ಹೊಲಸು ರಾಜಕಾರಣದ ಚೌಕಟ್ಟಿನಲ್ಲಿ ಸ್ವಚ್ಚ ಭಾರತದ ಕನಸು ಕಾಣುತ್ತಿದ್ದೇವೆ.




  • -ನಾ ದಿವಾಕರ

ಇತ್ತೀಚಿನ ಸುದ್ದಿ