ಸ್ಟ್ರೋಕ್ ಆಗಿದ್ದ ವಿದ್ಯಾರ್ಥಿಯನ್ನು ರೇಗಿಸಿದ ಸಹಪಾಠಿಗಳು | ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು! - Mahanayaka
3:22 AM Wednesday 11 - December 2024

ಸ್ಟ್ರೋಕ್ ಆಗಿದ್ದ ವಿದ್ಯಾರ್ಥಿಯನ್ನು ರೇಗಿಸಿದ ಸಹಪಾಠಿಗಳು | ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು!

harshith gowda
23/03/2021

ಹಾಸನ: ನಮ್ಮ ಸಮಾಜ ಯಾಕೆ ಹೀಗಿದೆ? ಇನ್ನೊಬ್ಬರ ಬಗ್ಗೆ ಮಾತನಾಡುವುದು, ಇನ್ನೊಬ್ಬರನ್ನು ನಿಂದಿಸುವುದೆಂದರೆ ಇನ್ನಿಲ್ಲದ ಖುಷಿ ಕೆಲವರಿಗೆ. ಯಾರದ್ದೋ ಜಾತಿ ತೋರಿಸಿ ನಿಂದಿಸುವುದು. ಯಾರಾದರು ಮಾನಸಿಕ ಅಸ್ವಸ್ಥರಿದ್ದರೆ, ಅವರನ್ನು ನೋಡಿ ನಗುವುದು, ಅಪಹಾಸ್ಯ ಮಾಡುವುದು, ಯಾರಾದರೂ ಅಂಗ ವೈಫಲ್ಯಕ್ಕೆ ತುತ್ತಾಗಿದ್ದರೆ ಅವರನ್ನು ಅಪಹಾಸ್ಯ ಮಾಡುವುದು, ನಿಂದಿಸುವುದು ಇವೆಲ್ಲವೂ ಈ ಸಮಾಜದಲ್ಲಿ ಸರ್ವೇ  ಸಾಮಾನ್ಯವಾಗಿ ಹೋಗಿದೆ. ಇಂತಹ ರೋಗ ಚಿಕ್ಕ ಮಕ್ಕಳಿರುವಾಗಲೇ ಮಕ್ಕಳ ಮೆದುಳಿಗೆ ಮನೆಯ ದೊಡ್ಡವರಿಂದಲೇ ಹರಡಲ್ಪಡುತ್ತದೆ.  ಆದರೆ ಇದರಿಂದ ತೊಂದರೆಗೊಳಗಾಗುವವರು ಮಾತ್ರ ಬೇರೆಯವರೇ ಆಗಿದ್ದಾರೆ.

ಇಷ್ಟೆಲ್ಲ ಪೀಠಿಕೆ ಯಾಕೆ ಹಾಕಬೇಕಾಯಿತು ಗೊತ್ತೆ? ಹಾಸನದಲ್ಲೊಬ್ಬ 10ನೇ ತರಗತಿಯ ಮುಗ್ಧ ಬಾಲಕ ತನ್ನ ಸಹಪಾಠಿಗಳಿಂದ ನಿಂದನೆಗೊಳಗಾಗಿದ್ದು, ಇದರಿಂದ ನೊಂದ ಆತ ಆತ್ಮಹತ್ಯೆಗೆ ಶರಣಾಗಿದ್ದು, ಸಹಪಾಠಿಗಳು ಬಾಲಕನ ದೈಹಿಕ ನ್ಯೂನ್ಯತೆಗಳನ್ನು ತೋರಿಸಿ, ಇತರ ಮಕ್ಕಳ ಎದುರು ಆತನನ್ನು ವ್ಯಂಗ್ಯವಾಡಿದ್ದರಿಂದಾಗಿ ನೊಂದ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇನ್ನೂ ಬಾಳಿ ಬದುಕಬೇಕಿದ್ದ 16 ವರ್ಷದ ಹರ್ಷಿತ್ ಗೌಡ.ಆತ್ಮಹತ್ಯೆಗೆ ಶರಣಾದವ. ಈ ಪ್ರಕರಣವನ್ನು ಆತ್ಮಹತ್ಯೆ ಎನ್ನಬೇಕೇ, ಮಾನಸಿಕವಾಗಿ ಜರ್ಝರಿತ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಬೇಕೋ ಗೊತ್ತಿಲ್ಲ, ಆದರೆ, ಈ ಬಾಲಕನಿಗೆ ಆದ ಅನ್ಯಾಯ ಸಮಾಜದಲ್ಲಿ ಬಹಳಷ್ಟು ಜನರಿಗೆ ಆಗುತ್ತಲೇ ಇದೆ.

ಹಾಸನ ತಾಲ್ಲೂಕಿನ ಕಂಚಮಾರನಹಳ್ಳಿ ಬಳಿಯ ಖಾಸಗಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಹರ್ಷಿತ್ ಗೆ ಒಂದು ವರ್ಷದ ಹಿಂದೆ ಸ್ಟ್ರೋಕ್ ಆಗಿತ್ತು. ಸ್ಟ್ರೋಕ್ ಆಗಿದ್ದರಿಂದಾಗಿ ಆತನ ಸಹಪಾಠಿಗಳು ಆತನನ್ನು ದಿನವೂ ರೇಗಿಸುತ್ತಿದ್ದರು.  ಸಹಪಾಠಿಗಳು ತನ್ನನ್ನು ಎಲ್ಲರ ಎದುರು ವ್ಯಂಗ್ಯವಾಡುವುದು, ನಿಂದಿಸುವುದು ಮಾಡುತ್ತಿದ್ದರು. ಇದರಿಂದಾಗಿ ಹರ್ಷಿತ್ ಗೌಡನಿಗೆ ಶಾಲೆಗೆ ಹೋಗುವ ಉತ್ಸಾಹ ಕೂಡ ಹೋಗಿತ್ತು.

ಮಾರ್ಚ್ 19ರಂದು ಶಾಲೆಯಲ್ಲಿ ಇದೇ ವಿಚಾರವಾಗಿ ಗಲಾಟೆ ನಡೆದಿತ್ತು. ಈ ಸಂದರ್ಭ ಶಿಕ್ಷಕರು ಇತರ ವಿದ್ಯಾರ್ಥಿಗಳ ಮೇಲೆ ಕ್ರಮಕೈಗೊಳ್ಳುವುದು ಬಿಟ್ಟು ಬುದ್ಧಿ ಮಾತು ಹೇಳಿ ಕಳುಹಿಸಿದ್ದಾರೆ.  ಎಲ್ಲರ ಎದುರು ಪದೇ ಪದೇ ನಿಂದಿಸುವುದು, ತನ್ನ ನೋವನ್ನು ಯಾರೂ ಕೂಡ ಕೇಳದೇ ಇರುವುದರಿಂದ ತೀವ್ರವಾಗಿ ನೊಂದ ಹರ್ಷಿತ್ ಶಾಲೆ ಬಿಟ್ಟು ತನ್ನ ಊರಿಗೆ ಹೊರಟು ಹೋಗಿದ್ದಾನೆ.

ಊರಿಗೆ ಬಂದ ಬಳಿಕ ದನ ಮೇಯಿಸಲು ಹೋದ ಹರ್ಷಿತ್ ವಾಪಸ್ ಬರಲಿಲ್ಲ. ಮನೆಯವರು ಹುಡುಕಾಡಿದಾಗ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಭಾರತದಲ್ಲಿ ನಿಂದನೆಗಳಿಗೇನೂ ಕಡಿಮೆ ಇಲ್ಲ. ಮನುಷ್ಯನನ್ನು ನೇರವಾಗಿ ಕೊಲ್ಲುವುದಕ್ಕಿಂತ ಹೆಚ್ಚಾಗಿ ಚುಚ್ಚು ಮಾತುಗಳು, ನಿಂದನೆಗಳಿಂದ ಕೊಲ್ಲುತ್ತಾರೆ. ಇನ್ನೊಬ್ಬರ ಜಾತಿಯ ಬಗ್ಗೆ, ಧರ್ಮದ ಬಗ್ಗೆ, ಅಂಗವೈಕಲ್ಯದ ಬಗ್ಗೆ, ಮಾನಸಿಕ ರೋಗದ ಬಗ್ಗೆ, ಮಹಿಳೆಯರ ಶೀಲದ ಬಗ್ಗೆ ಹೀಗೆ ಚುಚ್ಚು ಮಾತುಗಳಿಂದ ನಡೆಸುತ್ತಿರುವ ಕೊಲೆಗಳು ಇನ್ನೂ ಬೆಳಕಿಗೆ ಬರುತ್ತಿಲ್ಲ. ಎಷ್ಟೋ ಜನರು ಮಾನ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಸಮಾಜದಲ್ಲಿರುವ ವಿಕೃತ ಮನಸ್ಸುಗಳಾಗಿವೆ. ಹರ್ಷಿತ್ ಅನುಭವಿಸಿದ ನೋವು ಇನ್ನೊಬ್ಬರಿಗೆ ಬರುವುದು ಬೇಡ. ನಾವು ಬದಲಾಗಿ ಸಮಾಜವನ್ನೂ ಬದಲಾಯಿಸೋಣ ಎಂದಷ್ಟೆ ಹೇಳಬಹುದು.

ಇತ್ತೀಚಿನ ಸುದ್ದಿ