ಸಿಎಂ ಯಡಿಯೂರಪ್ಪ ವಿರುದ್ಧವೇ ಈಶ್ವರಪ್ಪ ಗಂಭೀರ ಆರೋಪ | ಸರ್ಕಾರ ಗಡಗಡ
ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಿಎಂ ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪ ಮಾಡಿ ರಾಜ್ಯಪಾಲ ವಜುಬಾಯಿ ವಾಲಾ ಹಾಗೂ ಬಿಜೆಪಿ ವರಿಷ್ಠರಿಗೆ ಪತ್ರ ಬರೆದಿದ್ದು, ಸಿಡಿ ರಾಜಕೀಯದಲ್ಲಿ ರಾಜ್ಯ ಸರ್ಕಾರ ಸೊರಗಿರುವ ನಡುವಲ್ಲೇ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೊಸ ತಲೆನೋವು ಆರಂಭವಾಗಿದೆ.
ಕಳೆದ ಒಂದು ವರ್ಷದಿಂದ ನನ್ನ ಇಲಾಖೆಯಲ್ಲಿ ಮುಖ್ಯಮಂತ್ರಿಗಳು ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ನನ್ನ ಗಮನಕ್ಕೆ ತರದೇ ಇಲಾಖೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಸಚಿವರ ಅಭಿಪ್ರಾಯಗಳನ್ನು ನಿರ್ಲಕ್ಷಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. 2020-21ರ ಬಜೆಟ್‌ನಲ್ಲಿ ಪ್ರಕಟಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಿಲ್ಲ. ಕಳೆದ ಒಂದೂವರೆ ವರ್ಷದಲ್ಲಿ ವಿಶೇಷ ಅನುದಾನದ ಹೆಸರಿನಲ್ಲಿ 1439.25 ಕೋಟಿಗೆ ಅನುಮೋದನೆ ನೀಡಿದೆ. ಹಣಕಾಸು ಇಲಾಖೆ 81 ವಿಧಾನಸಭಾ ಕ್ಷೇತ್ರಗಳಿಗೆ 775 ಕೋಟಿ ಅನುಮೋದನೆ ನೀಡಿದೆ. ಒದೊಂದು ವಿಧಾನಸಭಾ ಕ್ಷೇತ್ರಕ್ಕೆ 5 ಕೋಟಿಯಿಂದ 23 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಹಣಕಾಸು ಇಲಾಖೆಯ ದೊಡ್ಡ ಮೊತ್ತದ ಅನುಮೋದನೆ ಬೇಕಾಬಿಟ್ಟಿ ನೀಡುವುದರಿಂದ ಗ್ರಾಮೀಣ ಮೂಲ ಸೌಕರ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಇಲಾಖೆ ಯೋಜನೆಗಳ ಮೇಲೆ ದೀರ್ಘಾವಧಿಯಲ್ಲಿ ಪರಿಣಾಮ ಬೀರಲಿದೆ. ಹಣಕಾಸು ಇಲಾಖೆಯ ಆದೇಶದಲ್ಲಿ ಬಿಜೆಪಿ ಮತ್ತು ಇತರ ಪಕ್ಷಗಳ ಶಾಸಕರಿಗೂ ದೊಡ್ಡ ಮೊತ್ತದ ಅನುದಾನ ಬಿಡುಗಡೆ ಮಾಡಿದ್ದಾರೆ. ಬಿಜೆಪಿ 32, ಜೆಡಿಎಸ್ 18, ಕಾಂಗ್ರೆಸ್ 30, ಬಿಎಸ್‌ಪಿ 1 ಹೀಗೆ 81 ಶಾಸಕರಿಗೆ ಅನುದಾನ ನೀಡಲಾಗಿದೆ. 2020-21 ಬಜೆಟ್ ಪ್ಯಾರಾ 147ರಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಗ್ರಾಮೀಣ ಸುಮಾರ್ಗ ಯೋಜನೆಯನ್ನು ಪ್ರಕಟಿಸಲಾಗಿತ್ತು. ಈ ಯೋಜನೆಯಡಿ 5 ವರ್ಷಗಳಲ್ಲಿ 20 ಸಾವಿರ ಕಿ. ಮೀ. ಅಭಿವೃದ್ಧಿಪಡಿಸಲು 780 ಕೋಟಿ ನಿಗದಿ ಮಾಡಲಾಗಿತ್ತು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 30 ಕಿ. ಮೀ. ರಸ್ತೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ನಮ್ಮ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು. ನಿಗದಿ ಮಾಡಿದ ಹಣವನ್ನು ಹಣಕಾಸು ಇಲಾಖೆ ನಿಡಲೇ ಇಲ್ಲ. ಪದೇ ಪದೇ ಪತ್ರ ಬರೆದರೂ ಹಣ ಬಿಡುಗಡೆ ಮಾಡಲೇ ಇಲ್ಲ. ಇದಕ್ಕೆ ಕಾರಣವೂ ಗೊತ್ತಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.
ಪತ್ರದಲ್ಲಿ ಆರೋಪಗಳ ಸುರಿಮಳೆಯನ್ನೇ ಈಶ್ವರಪ್ಪ ಸುರಿಸಿದ್ದಾರೆ. ಇನ್ನೊಂದೆಡೆ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಈಶ್ವರಪ್ಪ ಅವರ ಪತ್ರದ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಸರ್ಕಾರದ ಹಿರಿಯ ಸಚಿವರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಈ ಕೂಡಲೇ ಮುಖ್ಯಮಂತ್ರಿ ಅವರು ತಮ್ಮ ರಾಜಿನಾಮೆ ಸಲ್ಲಿಸಬೇಕು ಇಲ್ಲವೇ ಈಶ್ವರಪ್ಪ ಆರೋಪ ಸುಳ್ಳೆಂದು ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಹೇಳಿದ್ದಾರೆ.