ಲಾಕ್ ಡೌನ್ ತಂದ ಸಂಕಷ್ಟ | ಗ್ಯಾಸ್ ಸಿಲಿಂಡರ್ ಸ್ಫೋಟಿಸಿಕೊಂಡು ರೈತನ ಕುಟುಂಬ ಆತ್ಮಹತ್ಯೆ
ಚಂಡೀಘರ್: ಲಾಕ್ ಡೌನ್ ನಿಂದಾಗಿ ತೀವ್ರ ಸಂಕಷ್ಟಕ್ಕೀಡಾದ ರೈತನೋರ್ವ ತನ್ನ ಕುಟುಂಬಕ್ಕೆ ಬೆಂಕಿಯಿಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಜಾಬ್ ನಲ್ಲಿ ನಡೆದಿದೆ.
ಧರ್ಮಪಾಲ್ ಎಂಬ ರೈತ ಈ ಕೃತ್ಯ ನಡೆಸಿದವನಾಗಿದ್ದಾನೆ. ವ್ಯಕ್ತಿಯೊಬ್ಬನಿಂದ 8 ಲಕ್ಷ ರೂಪಾಯಿಯನ್ನು ಇವರು ಸಾಲ ರೂಪದಲ್ಲಿ ಪಡೆದಿದ್ದರು. ಇದರ ಜೊತೆಗೆ ವ್ಯಕ್ತಿಯೊಬ್ಬನಿಗೆ ಇಷ್ಟೇ ಮೊತ್ತದ ಹಣವನ್ನು ಸಾಲವಾಗಿ ನೀಡಿದ್ದರು. ಈ ನಡುವೆ ಮಾರ್ಚ್ 25ರಂದು ಲಾಕ್ ಡೌನ್ ಘೋಷಣೆಯಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಕುಟುಂಬ ನಿರ್ವಹಣೆ ನಡೆಸಿದ್ದೇ ಒಂದು ಸಾಹಸ ಎಂದು ತನ್ನ ಡೆತ್ ನೋಟ್ ನಲ್ಲಿ ಧರ್ಮಪಾಲ್ ಹೇಳಿದ್ದಾರೆ.
ಇಡೀ ಕುಟುಂಬ ಮಲಗಿದ್ದ ಸಂದರ್ಭದಲ್ಲಿ ಧರ್ಮಪಾಲ್ ಮನೆಗೆ ಒಳಗಿಂದ ಲಾಕ್ ಮಾಡಿಕೊಂಡು, 10 ಲೀಟರ್ ಸೀಮೆ ಎಣ್ಣೆ ತನಗೆ ಸುರಿದುಕೊಂಡು, ಮನೆಯ ಸಿಲಿಂಡರ್ ಆನ್ ಮಾಡಿ, ಅದರ ನಿಯಂತ್ರಕವನ್ನು ತೆಗೆದು ಹಾಕಿ ಬೆಂಕಿ ಹಚ್ಚಿಕೊಂಡಿದ್ದಾರೆ. ಇದರ ಪರಿಣಾಮ ಇಡೀ ಕುಟುಂಬವೇ ಜೀವಂತ ದಹನವಾಗಿದೆ. ಈ ಘಟನೆಯು ಎಂತಹವರ ಹೃದಯವನ್ನು ಝಲ್ ಎನಿಸುವಂತೆ ಕಂಡು ಬಂದಿತ್ತು.
ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಿಸಿತ್ತು. ಆದರೆ ಇದೇ ಲಾಕ್ ಡೌನ್ ಇದೀಗ ಜನರಿಗೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತಿರುವುದು ಮತ್ತು ಆರ್ಥಿಕ ಸಂಕಷ್ಟದಿಂದ ಜನರು ಆತ್ಮಹತ್ಯೆಯ ದಾರಿ ಹಿಡಿದಿರುವುದು ಆತಂಕಕ್ಕೆ ಕಾರಣವಾಗಿದೆ.