ಸೊಂಟದಲ್ಲಿ ಡ್ರ್ಯಾಗನ್ ಚಾಕು ಬಚ್ಚಿಟ್ಟುಕೊಂಡು ಸಚಿವ ಸುಧಾಕರ್ ಬಳಿಗೆ ಧಾವಿಸಿದ ವ್ಯಕ್ತಿಯ ಬಂಧನ
ಚಿಕ್ಕಬಳ್ಳಾಪುರ: ಸೊಂಟದಲ್ಲಿ ಡ್ರ್ಯಾಗನ್ ಚಾಕು ಇಟ್ಟುಕೊಂಡು ಸಚಿವ ಡಾ.ಸುಧಾಕರ್ ಕಡೆಗೆ ಧಾವಿಸಿದ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಇಂದು ಚಿಕ್ಕ ಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಮಾರಕಾಸ್ತ್ರ ಹಿಡಿದುಕೊಂಡು ಸಚಿವರತ್ತ ನುಗ್ಗಿದ್ದು ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ.
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಇಂದು ಈ ಗ್ರಾಮದಲ್ಲಿ ಕಾರು ಏರಿ ಹೊರಡಲು ಅನುವಾದ ಸಂದರ್ಭದಲ್ಲಿ ಜನರ ಗುಂಪಿನಲ್ಲಿ ಈ ವ್ಯಕ್ತಿ ಅವರತ್ತ ಧಾವಿಸಿದ್ದ. ಆಗ ಈತನ ಹೊಟ್ಟೆಗೆ ಪೊಲೀಸರೊಬ್ಬರ ಕೈ ತಾಕಿದಾಗ ಚಾಕು ಇರುವುದು ಬೆಳಕಿಗೆ ಬಂದಿತ್ತು.
ತಕ್ಷಣವೇ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದಾಗ, ಅಟ್ರಾಸಿಟಿ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ನಡೆದ ಗಲಾಟೆ ವೇಳೆ ಸವರ್ಣೀಯ ವ್ಯಕ್ತಿ ಈತನಿಗೆ ಬೆದರಿಕೆ ಹಾಕಿದ್ದು, ಟ್ರ್ಯಾಕ್ಟರ್ ಹತ್ತಿಸಿ ಸಾಯಿಸುವುದಾಗಿ ಹೆದರಿಸಿದ್ದ. ಅದೇ ಕಾರಣಕ್ಕೆ ಈತ ಪ್ರಾಣಭಯದಿಂದ ಚಾಕು ಇಟ್ಟುಕೊಂಡು ಓಡಾಡುತ್ತಿದ್ದ ಎನ್ನಲಾಗಿದೆ.
ಬಂಧಿತ ವ್ಯಕ್ತಿ ಸಚಿವ ಸುಧಾಕರ್ ಅವರ ಬೆಂಬಲಿಗನಾಗಿಯೂ ಗುರುತಿಸಿಕೊಂಡಿದ್ದು, ಗುಡಿಬಂಡೆ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka