ಅಡ್ವಾಣಿ ವಿರುದ್ಧ ಬರೆದಿದ್ದಕ್ಕೆ ಆಕ್ರೋಶ: ಪೊಲೀಸ್ ಭದ್ರತೆಯ ಮಧ್ಯೆಯೂ ಪತ್ರಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ
ಮಹಾರಾಷ್ಟ್ರದಲ್ಲಿ ನಾಲ್ಕು ದಶಕಗಳ ನಿಷ್ಪಕ್ಷಪಾತ ಪತ್ರಿಕೋದ್ಯಮಕ್ಕೆ ಹೆಸರಾಗಿರುವ ಹಿರಿಯ ಪತ್ರಕರ್ತ ನಿಖಿಲ್ ವಾಗ್ಲೆ ಯವರ ಕಾರಿನ ಮೇಲೆ ಪುಣೆಯಲ್ಲಿ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ನಡೆದಿದೆ. ಎಲ್‌ಕೆ ಅಡ್ವಾಣಿ ಯವರಿಗೆ ಭಾರತ ರತ್ನ ಘೋಷಣೆಯ ಬಗ್ಗೆ ನಿಖಿಲ್ ಬರೆದಿದ್ದ ಅಭಿಪ್ರಾಯ ವಿರೋಧಿಸಿ ಈ ದಾಳಿ ನಡೆಸಲಾಗಿದೆ ಎಂಬ ಅಭಿಪ್ರಾಯ ಇದೆ.
ಎಲ್‌ಕೆ ಅಡ್ವಾಣಿ ಯವರಿಗೆ ಭಾರತ ರತ್ನ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ನಿಖಿಲ್ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಬರೆದಿದ್ದರು. ಈ ಅಭಿಪ್ರಾಯವನ್ನು ವಿರೋಧಿಸಿ ಹಿರಿಯ ಬಿಜೆಪಿ ನಾಯಕ ಸುನೀಲ್ ಡಿಯೋಡಾರ್ ವಿಶ್ರಾಮ್‌ಬಾಗ್ ಪೊಲೀಸ್ ಠಾಣೆಯಲ್ಲಿ ನಿಖಿಲ್ ವಿರುದ್ಧ ದೂರು ದಾಖಲಿಸಿದ್ದರು.‘ನಿರ್ಭಯ್ ಬನೋ’ ಎನ್ನುವ ಕಾರ್ಯಕ್ರಮದಲ್ಲಿ ನಿಖಿಲ್ ಭಾಗವಹಿಸುವ ಹಿನ್ನೆಲೆಯಲ್ಲಿ ಅದನ್ನು ನಿಷೇಧಿಸಬೇಕು ಎಂದು ಬಿಜೆಪಿ ಪುಣೆ ಪೊಲೀಸರಿಗೆ ಮನವಿ ಮಾಡಿತ್ತು. ಆದರೆ ನಿಖಿಲ್, “ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ, ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ” ಎಂದು ತಿಳಿಸಿದ್ದರು.
ಈ ಸಭೆಗೆ ತೆರಳುತ್ತಿದ್ದಾಗ ಡೆಕ್ಕನ್ ಪ್ರದೇಶದ ಖಂಡೋಜಿ ಬಾಬಾ ಚೌಕ್‌ನಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು, ಪೊಲೀಸರ ಭದ್ರತೆಯ ನಡುವೆಯೂ ವಾಗ್ಲೆ ಯವರ ಕಾರಿಗೆ ಕಲ್ಲು ತೂರಾಟ ನಡೆಸಿದ್ದಾರೆ. ದಾಳಿಯ ನಂತರವೂ ವಾಗ್ಲೆ ಸಭೆಯ ಸ್ಥಳಕ್ಕೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ನಿಖಿಲ್ ವಾಗ್ಲೆ ಸಂಚರಿಸುತ್ತಿದ್ದ ಕಾರಿನಲ್ಲಿ ನ್ಯಾಯವಾದಿ ಆಸಿಮ್ ಸರೋದೆ ಮತ್ತು ಸಾಮಾಜಿಕ ಕಾರ್ಯಕರ್ತ ವಿಶ್ವಂಭರ್ ಚೌಧರಿ ಕೂಡ ಇದ್ದರು. ಬಿಜೆಪಿಯವರ ದಾಳಿಯಿಂದ ಕಾರಿನ ಗಾಜು ಹುಡಿಯಾಗಿದ್ದು, ಕೂಡಲೇ ಕಾರನ್ನು ಸುತ್ತುವರಿದ ಪುಣೆ ಪೊಲೀಸರು ಹೆಚ್ಚಿನ ಅನಾಹುತದಿಂದ ಪಾರು ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಎರಡು ಎಫ್ ಐಆರ್ ದಾಖಲಾಗಿದೆ.