ಮಂಗಳೂರು: ಆಳ ಸಮುದ್ರದಲ್ಲಿ ಮುಳುಗಿದ 10 ಜನರಿದ್ದ ಮೀನುಗಾರಿಕಾ ದೋಣಿ
ಮಂಗಳೂರಿನಲ್ಲಿ ಆಳ ಸಮುದ್ರದ ಮೀನುಗಾರಿಕೆ ತೆರಳಿದ್ದ ಬೋಟೊಂದು ಅವಘಡಕ್ಕೀಡಾದ ಘಟನೆ ನಡೆದಿದೆ.
ಆಳ ಸಮುದ್ರಕ್ಕೆ ಹೋದ ಮೀನುಗಾರಿಕಾ ದೋಣಿಯ ತಳಭಾಗದಲ್ಲಿ ತೂತಾಗಿ ಮುಳುಗಡೆಯಾದ ಘಟನೆ ನಡೆದಿದೆ. ದೋಣಿಯಲ್ಲಿದ್ದ ಎಲ್ಲಾ 10 ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೋಟ್ ಸಂಪೂರ್ಣ ಮುಳುಗಡೆಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಜೈ ಶ್ರೀರಾಮ್ ಎಂಬ ಹೆಸರಿನ ಕೃಷ್ಣ ಕುಮಾರ್ ಮಾಲಕತ್ವದ ಮೀನುಗಾರಿಕಾ ದೋಣಿ ನಿನ್ನೆ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದು, ಆಳ ಸಮುದ್ರ ಭಾಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಏಕಾ ಏಕಿ ತೂತಾಗಿ ನೀರು ಒಳ ನುಗ್ಗಿತ್ತು.
ಈ ಸಂದರ್ಭದಲ್ಲಿ ದೋಣಿಯಲ್ಲಿದ್ದವರೂ ಆಸು-ಪಾಸಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರಿಕಾ ದೋಣಿಯವರಿಗೆ ಮಾಹಿತಿ ನೀಡಿದ್ದು, ಆ ಬೋಟ್ ನಲ್ಲಿದ್ದವರೂ ಅಪಘಾತಕ್ಕೆ ಸಿಲುಕಿದ್ದ ದೋಣಿಯಲ್ಲಿದ್ದವರನ್ನೂ ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ. ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಕಳೆದ ಕೆಲವು ದಿನಗಳಿಂದ ಸಮುದ್ರದಲ್ಲಿ ಭಾರಿ ಗಾಳಿ ಬೀಸುತ್ತಿದ್ದು, ಸಮುದ್ರ ಪ್ರಕ್ಷುಬ್ಧವಾಗಿದೆ.
ಇದೇ ಆಗಸ್ಟ್ 8ರ ವರೆಗೆ ಅರಬ್ಬೀ ಸಮುದ್ರವು ಪ್ರಕ್ಷುಬ್ಧವಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರಿಕೆ ದೋಣಿಗಳು ಕೂಡಲೇ ದಡ ಸೇರುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka