10 ತಿಂಗಳ ಮಗುವನ್ನು ಡಾಬಾದಲ್ಲಿ ಬಿಟ್ಟು ಹೋದ ತಾಯಿ | ಆ ನಂತರ ನಡೆದದ್ದೇನು ಗೊತ್ತಾ? - Mahanayaka
1:59 AM Thursday 12 - December 2024

10 ತಿಂಗಳ ಮಗುವನ್ನು ಡಾಬಾದಲ್ಲಿ ಬಿಟ್ಟು ಹೋದ ತಾಯಿ | ಆ ನಂತರ ನಡೆದದ್ದೇನು ಗೊತ್ತಾ?

15/01/2021

ಹಾವೇರಿ: ಶ್ರೀಮಂತರ ಮಕ್ಕಳ ಜೀವನ ಹಾಳು ಮಾಡುವ ಡ್ರಗ್ಸ್ ನ ವಿರುದ್ಧ ಎಲ್ಲರೂ ಮಾತನಾಡುತ್ತಾರೆ. ಅದು ಕಾನೂನು ಬಾಹಿರ, ಮನುಷ್ಯರ ಮೇಲೆ ಅದು ದುಷ್ಪರಿಣಾಮ ಬೀರುತ್ತದೆ ಎಂದೆಲ್ಲ ಹೇಳುತ್ತಾರೆ. ಆದರೆ ಬಡವರ ಮೇಲೆ ಪರಿಣಾಮ ಬೀರುವ ಮದ್ಯಪಾನಕ್ಕೆ ಸರ್ಕಾರವೇ ಬೆಂಬಲ ನೀಡುತ್ತದೆ. ಈ ಮದ್ಯಪಾನದಿಂದಾಗಿ ಎಷ್ಟೋ ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ಬಡವರ ಮನೆಯಲ್ಲಿ ನೆಮ್ಮದಿ ಹೋಗಿವೆ. ಇಂತಹದ್ದೇ ಒಂದು ಮನಕಲಕುವ ಘಟನೆಯೊಂದು  ಹಾವೇರಿಯ ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್ ನಲ್ಲಿ ನಡೆದಿದೆ.

ಹೆತ್ತ ತಾಯಿಯೊಬ್ಬಳು ತನ್ನ 10 ತಿಂಗಳ ಮಗುವನ್ನು ಡಾಬಾವೊಂದರಲ್ಲಿ ಬಿಟ್ಟು ಹೋಗಿದ್ದಾಳೆ.  ಬಹಳಷ್ಟು ಸಮಯ ಕಾದರೂ ಮಗುವಿನ ತಾಯಿ ಬಾರದ ಹಿನ್ನೆಲೆಯಲ್ಲಿ ಡಾಬಾದವರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಪೊಲೀಸರು ಆಗಮಿಸಿದ್ದಾರೆ.

ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ  ಅಧಿಕಾರಿಗಳು ಮಗುವಿನ ತಾಯಿಯನ್ನು ಪತ್ತೆ ಹಚ್ಚಬೇಕು ಎಂದು ನಿರಂತರವಾಗಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮಗುವನ್ನು ಅಧಿಕಾರಿಗಳು ದತ್ತು ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.

ಅಚ್ಚರಿ ಎಂಬಂತೆ ಮರುದಿನ ಪೊಲೀಸ್ ಠಾಣೆಗೆ ಮಗುವಿನ ತಾಯಿ ಬಂದಿದ್ದಾಳೆ. ಈ ವೇಳೆ ಆ ತಾಯಿಯ ನರಕಯಾತನೆಯ ಕಥೆ ಪೊಲೀಸರಿಗೆ ತಿಳಿಸಿದ್ದಾಳೆ. ಮಗುವಿನ ತಾಯಿಯನ್ನು ರೇಖಾ ಎಂದು ಗುರುತಿಸಲಾಗಿದ್ದು, ಈಕೆಯ ಗಂಡ ಪ್ರತಿನಿತ್ಯ ಕಂಠಮಟ್ಟ ಮದ್ಯ ಕುಡಿದು ಮನೆಯಲ್ಲಿ ಇನ್ನಿಲ್ಲದ ಕಾಟ ಕೊಡುತ್ತಿದ್ದ. ಗಂಡನ ಟಾರ್ಚರ್ ತಾಳಲಾರದೇ ರೇಖಾ ಅವರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಆದರೆ ಪುಟ್ಟ ಕಂದನನ್ನು ಕೊಲ್ಲಲು ಅವರಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ಡಾಬಾದ ಬಳಿಯಲ್ಲಿ ಬಿಟ್ಟು ಹೋಗಿದ್ದಾರೆ.

ಡಾಬಾದ ಬಳಿಯಲ್ಲಿ ಮಗುವನ್ನು ಬಿಟ್ಟು ಸಾಯಲು ಹೊರಟಾಗ ಮಗುವನ್ನು ಬಿಟ್ಟು ಹೋಗಲು ಅವರಿಂದ ಸಾಧ್ಯವಾಗಿರಲಿಲ್ಲ. ತಾಯಿ ಪ್ರೀತಿ ಎಂದರೆ, ಅದೇ ಅಲ್ಲವೇ?, ಮಗು ಎಲ್ಲಿ ಹೋಗುತ್ತದೆ? ಯಾರು ಕೊಂಡು ಹೋಗುತ್ತಾರೆ ಎಂದು ರೇಖಾ ಅವರು ಮರೆಯಲ್ಲಿ ನಿಂತು ನೋಡುತ್ತಿದ್ದರು. ಪೊಲೀಸರು ಬಂದು ಕರೆದುಕೊಂಡು ಹೋಗಿದ್ದರಿಂದಾಗಿ, ರಾತ್ರಿಯಿಡೀ ಮಗುವನ್ನು ನೆನೆದು ಕಣ್ಣೀರು ಹಾಕಿದ್ದ ಅವರು,  ಮರುದಿನ ಬೆಳಗ್ಗೆ ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾರೆ.

ಇದೀಗ ಪೊಲೀಸರು ಮಗುವನ್ನು ತಾಯಿ ಮಡಿಲಿಗೆ ಸೇರಿಸಿದ್ದಾರೆ. ಜೊತೆಗೆ ಮಗುವನ್ನು ಅವರು ಹೇಗೆ  ನೋಡಿಕೊಳ್ಳುತ್ತಿದ್ದಾರೆಯೇ ಎಂಬ ಬಗ್ಗೆ ನಿಗಾ ಇಟ್ಟಿದ್ದಾರೆ.

ಇತ್ತೀಚಿನ ಸುದ್ದಿ