11 ವರ್ಷದ ಬಾಲಕನಿಗೆ ಭಯೋತ್ಪಾದಕನ ಪಟ್ಟ! | ಶಿಕ್ಷಕನ ಯಡವಟ್ಟಿನಿಂದ ಆಗಿದ್ದೇನು?

ಲಂಡನ್: 11 ವರ್ಷದ ಬಾಲಕನಿಗೆ ಭಯೋತ್ಪಾದಕರ ಜೊತೆಗೆ ಸಂಬಂಧ ಇದೆ ಎಂದು ಶಾಲಾ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಬಾಲಕನನ್ನು ವಿಚಾರಣೆ ನಡೆಸಿದ್ದಾರೆ.
ಯುಕೆಯ ವಾರ್ವಿಕ್ ಷೈರ್ ನಲ್ಲಿ ಈ ಘಟನೆ ನಡೆದಿದೆ. ಶಿಕ್ಷಕರೊಬ್ಬರು ತರಗತಿಯಲ್ಲಿ ವಿದ್ಯಾರ್ಥಿಗಳ ಬಳಿಯಲ್ಲಿ, “ನಿಮ್ಮಲ್ಲಿ ಸಾಕಷ್ಟು ಹಣ ಇದ್ದರೆ, ಏನು ಮಾಡುತ್ತೀರಿ?” ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಬಾಲಕ, “ತುಳಿತಕ್ಕೊಳಗಾದವರಿಗೆ ಶಸ್ತ್ರಾಸ್ತ್ರ ನೀಡುತ್ತೇನೆ” ಎಂದು ಹೇಳಿದ್ದಾನೆ ಎಂದು ಶಿಕ್ಷಕ ಪೊಲೀಸರಿಗೆ ತಿಳಿಸಿದ್ದಾರೆ.
ಆದರೆ, ಶಿಕ್ಷಕನ ತಪ್ಪು ಗ್ರಹಿಕೆಯಿಂದಾಗಿ ಈ ರೀತಿಯ ಗೊಂದಲ ಸೃಷ್ಟಿಯಾಗಿದೆ ಎನ್ನುವುದು ಆ ಬಳಿಕ ತಿಳಿದು ಬಂದಿದೆ. ವಿದ್ಯಾರ್ಥಿಯ ಉತ್ತರವನ್ನು ಶಿಕ್ಷಕ ತಪ್ಪಾಗಿ ಗ್ರಹಿಸಿದ್ದಾನೆ. ವಿದ್ಯಾರ್ಥಿಯು “ತನ್ನ ಬಳಿ ಸಾಕಷ್ಟು ಹಣವಿದ್ದರೆ, ತುಳಿತಕ್ಕೊಳಗಾದವರಿಗೆ ದಾನ ಮಾಡುತ್ತೇನೆ” ಎಂದು ಹೇಳಿದ್ದಾನೆ. ಆದರೆ ಶಿಕ್ಷಕನಿಗೆ ಕೇಳಿದ್ದೇ ಬೇರೆ.
ಶಿಕ್ಷಕನ ತಪ್ಪು ಗ್ರಹಿಕೆಯಿಂದ ಬಾಲಕನ ಭವಿಷ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಸೃಷ್ಟಿಯಾಗಿತ್ತು. ಭಯೋತ್ಪಾದನಾ ವಿರೋಧಿ ಅಧಿಕಾರಿಗಳ ತಂಡ ಬಾಲಕ ಹಾಗೂ ಆತನ ಪೋಷಕರನ್ನು ನಿರಂತರವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಕೊನೆಗೂ ಶಿಕ್ಷಕನ ಯಡವಟ್ಟು ತಿಳಿದು ಬಂದಿದ್ದು, ಅಧಿಕಾರಿಗಳು ಶಿಕ್ಷಕನಿಗೆ ಎಚ್ಚರಿಕೆ ನೀಡಿದ್ದಾರೆ.