ಮಗಳ ಮದುವೆ ಮುಂದೂಡಿ, 1,100 ಮೃತದೇಹಗಳ ಅಂತ್ಯಕ್ರಿಯೆ ನಡೆಸಿದ ಎಎಸ್ ಐ
ನವದೆಹಲಿ: ಕೊರೊನಾ ಸೋಂಕಿನಿಂದ ಮೃತಪಟ್ಟ 1,100 ಮೃತದೇಹಗಳಿಗೆ ದೆಹಲಿ ಪೊಲೀಸ್ ಇಲಾಖೆಯ ಎಎಸ್ ಐಯೊಬ್ಬರು ಅಂತ್ಯಕ್ರಿಯೆ ನೆರೆವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದು, ಇವರ ಸೇವೆಗೆ ಇಡೀ ದೇಶವೇ ಗೌರವ ಸಲ್ಲಿಸಿದೆ.
56 ವರ್ಷ ವಯಸ್ಸಿನ ರಾಕೇಶ್ ಕುಮಾರ್ ಈ ಮಾನವೀಯ ಕಾರ್ಯ ಮಾಡಿರುವ ಎ ಎಸ್ ಐ ಆಗಿದ್ದಾರೆ. ತಮ್ಮ ಮಗಳ ಮದುವೆಯನ್ನು ಮುಂದೂಡಿ, ಅವರು ಈ ಕೆಲಸಗಳನ್ನು ಮಾಡಿದ್ದಾರೆ. ಕಳೆದ ಒಂದು ವಾರಗಳಿಂದ ಅನಾಥ ಮೃತದೇಹಗಳಿಗೆ ಅವರು ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ.
ದೆಹಲಿಯಲ್ಲಿ ಕೊರೊನಾ ಸೋಂಕಿನಿಂದ ದಿನನಿತ್ಯ ಜನರು ಸಾವನ್ನಪ್ಪುತ್ತಿದ್ದಾರೆ. ಸಾವಿನ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಹೋಗಿದೆ. ಇದೇ ಸಂದರ್ಭದಲ್ಲಿ ಅಂತ್ಯಕ್ರಿಯೆಗೆ ಮೃತಪಟ್ಟವರ ಕುಟುಂಬಸ್ಥರೇ ಬರುತ್ತಿಲ್ಲ. ಹೀಗಾಗಿ ಮೃತದೇಹಗಳು ಅಂತ್ಯಕ್ರಿಯೆ ಇಲ್ಲದೇ ಅನಾಥವಾಗಿ ಉಳಿಯುವಂತಿತ್ತು. ಈ ಸಂದರ್ಭದಲ್ಲಿ ರಾಕೇಶ್ ಕುಮಾರ್ ಅವರೇ ಸ್ವತಃ ತಾನೇ ಆಂಬುಲೆನ್ಸ್ ಗಳಲ್ಲಿ ಬರುವ ಮೃತದೇಹಗಳ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ.
ತಮ್ಮ 56ನೇ ವಯಸ್ಸಿನಲ್ಲಿಯೂ ಕೊವಿಡ್ ಗೂ ಭಯಪಡದೇ ಅವರು ಜನರ ಸೇವೆಯಲ್ಲಿ ತೊಡಗಿದ್ದು, ಅವರ ಕಾರ್ಯವನ್ನು ಡೆಲ್ಲಿ ಪೊಲೀಸ್ ಕಮಿಷನರ್ ಎಸ್.ಎನ್.ಶ್ರೀವತ್ಸವ್ ಪ್ರಸಂಶಿಸಿದ್ದು, ರಾಕೇಶ್ ಕುಮಾರ್ ಅವರ ಸೇವೆ ಅಮೂಲ್ಯವಾದದ್ದು. ಅವರು ಎಲ್ಲರಿಗೂ ಮಾದರಿಯಾಗಲಿ, ಅವರಿಂದ ಕಲಿಯಬೇಕಾಗಿರುವುದು ಬಹಳಷ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ.