ಪಿಪಿಇ ಕಿಟ್ ಧರಿಸಿ 12 ಗಂಟೆ ಕೆಲಸ ಮಾಡುತ್ತಿರುವ ನರ್ಸ್ ಗಳು | ಇವರ ತ್ಯಾಗಗಳಿಗೆ ಅರ್ಥ ಇಲ್ಲವೇ?
ಶಿವಮೊಗ್ಗ: ಕೊರೊನಾ ನಡುವೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ನರ್ಸ್ ಗಳ ಸಂಕಟವನ್ನು ಕೇಳುವವರೇ ಇಲ್ಲವಾಗಿದೆ. 12 ಗಂಟೆಗಳ ಕಾಲ ರಾಜ್ಯದಲ್ಲಿ ನರ್ಸ್ ಗಳು ಕೆಲಸ ಮಾಡುತ್ತಿದ್ದಾರೆ. ತಮ್ಮ ಕುಟುಂಬಕ್ಕೆ ಅವರಿಗೆ ಸಮಯ ನೀಡಲು ಸಾಧ್ಯವಾಗದಿದ್ದರೂ, ಜನರಿಗಾಗಿ ಅವರು ಮಾಡುತ್ತಿರುವ ತ್ಯಾಗಕ್ಕೆ ಏನು ಹೇಳಿದರೂ ಕಡಿಮೆ. ಆದರೆ, ರಾಜ್ಯ ಸರ್ಕಾರವು ಇವರ ಹೊರೆಯನ್ನು ಕಡಿಮೆ ಮಾಡಲು ಕೂಡ ಪ್ರಯತ್ನಿಸದೇ, ಬೆಡ್ ದಂಧೆಯಲ್ಲಿಯೇ ನಿರತವಾಗಿದೆ ಎನ್ನುವ ಆಕ್ರೋಶಗಳು ಕೇಳಿ ಬಂದಿದೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನರ್ಸ್ ವೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದು, ಎಂತಹ ದುಷ್ಟರ ಮನಸ್ಸು ಕೂಡ ಕರಗಬಹುದು. ನರ್ಸ್ ಶಶಿಕಲಾ ಅವರು ಭದ್ರಾವತಿಯಿಂದ ಮೆಗ್ಗಾನ್ ಆಸ್ಪತ್ರೆಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ನಿಂದಾಗಿ ಯಾವುದೇ ವಾಹನಗಳ ವ್ಯವಸ್ಥೆ ಇಲ್ಲ. ಆಸ್ಪತ್ರೆ ಕೂಡ ಯಾವುದೇ ವಾಹನ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ತಮ್ಮ ಸ್ಕೂಟಿಯಲ್ಲಿಯೇ ತೆರಳಿ ಅವರು ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಯೊಬ್ಬರಿಗೆ ಅನಾರೋಗ್ಯದ ಕಾರಣ ಅವರ ಅವಧಿಯಲ್ಲಿ ಶಶಿಕಲಾ ಅವರು ಕೆಲಸ ಮಾಡುತ್ತಿದ್ದಾರೆ.
ಪಿಪಿಇ ಕಿಟ್ ಧರಿಸಿ 6 ಗಂಟೆಗಳ ಕಾಲ ಕೆಲಸ ಮಾಡುವುದೆಂದರೆ, ಪ್ರಾಣ ಹೋದಂತಾಗುತ್ತದೆ. ಆದರೆ, 12 ಗಂಟೆಗಳ ವರೆಗೆ ಕೆಲಸ ಮಾಡುವಂತಹ ಪರಿಸ್ಥಿತಿ ಶಶಿಕಲಾ ಅವರಿಗೆ ಬಂತು. ಈ 12 ಗಂಟೆಯಲ್ಲಿ ಸರಿಯಾಗಿ ಊಟ, ನೀರು ಕೂಡ ಸರಿಯಾಗಿ ಸಿಗುತ್ತಿಲ್ಲ. ಇವರ ತಂದೆಗೆ ಬಿಪಿ ಇದೆ. ಮಗಳು ಮನೆಗೆ ಬರುವುದು ತಡವಾದರೆ ಅವರಿಗೆ ಆತಂಕವಾಗುತ್ತದೆ. ಹಾಗಾಗಿ ಅವರು ಈ ಕೆಲಸ ಬೇಡ ಎಂದು ಹೇಳುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೆ ಕೆಲಸವೇ ಬೇಡ ಎಂದು ಅವರ ಮನೆಯಲ್ಲಿ ಹೇಳುತ್ತಿದ್ದಾರಂತೆ. ಮನೆಯವರ ವಿರೋಧದ ನಡುವೆಯೇ ಶಶಿಕಲಾ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ.
ಕೊರೊನಾ ಸಂದರ್ಭದಲ್ಲಿ ನರ್ಸ್ ಗಳು ಪ್ರಮುಖ ಕೆಲಸ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರವು ಇವರಿಗೆ ಪ್ರಾಮುಖ್ಯತೆಯನ್ನೇ ಕೊಡುತ್ತಿಲ್ಲ. ಸಿಬ್ಬಂದಿಯ ಕೊರತೆಯಿಂದ ನರ್ಸ್ ಗಳನ್ನು ಆಸ್ಪತ್ರೆಗಳಲ್ಲಿ ಎರಡು ಪಟ್ಟು ಹೆಚ್ಚು ಕೆಲಸ ಮಾಡಿಸುತ್ತಿದ್ದಾರೆ. ಅವರ ಕುಟುಂಬ ಎಲ್ಲವನ್ನು ಬಿಟ್ಟು ನರ್ಸ್ ಗಳು ಕೆಲಸ ಮಾಡುತ್ತಿದ್ದಾರೆ. ಇಂತಹ ತ್ಯಾಗಗಳ ನಡುವೆಯೇ ಕೆಲವರು ಕೊರನಾ ಕಾಲವನ್ನು ಭ್ರಷ್ಟಾಚಾರ ನಡೆಸಲು ಬಳಸಿಕೊಳ್ಳುತ್ತಿದ್ದಾರೆ. ಹೀಗಾದರೆ, ನರ್ಸ್ ಗಳು, ಆರೋಗ್ಯ ಕಾರ್ಯಕರ್ತರ ತ್ಯಾಗಗಳಿಗೆ ಅರ್ಥ ಇದೆಯೇ? ಸರ್ಕಾರ ಒಂದೋ ಸರಿಯಾಗಬೇಕು. ಇಲ್ಲವೇ ಬದಲಾಗಬೇಕು ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.