13 ವರ್ಷ ದೂರವಾಗಿದ್ದ ದಂಪತಿಗಳ ಮಿಲನ: ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಪ್ರಕರಣ ಇತ್ಯರ್ಥ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೆಶನದ ಮೇರೆಗೆ ದಿನಾಂಕ 13-08-2022 ರಂದು ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತನ್ನು ಆಯೋಜಿಸಿ ಒಂದೇ ದಿನ ಒಟ್ಟು 20,444 ಪ್ರಕರಣಗಳನ್ನು (ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ -34, ಚೆಕ್ಕು ಅಮಾನ್ಯ ಪ್ರಕರಣ-226, ಬ್ಯಾಂಕ್ / ಹಣ ವಸೂಲಾತಿ ಪ್ರಕರಣ-24, ಎಂ.ವಿ.ಸಿ ಪ್ರಕರಣ-90, ಕಾರ್ಮಿಕ ನಷ್ಟ ಪರಿಹಾರ ಪ್ರಕರಣ-1, ಎಂ.ಎಂಆರ್.ಡಿ ಆಕ್ಟ್ ಪ್ರಕರಣ-12, ವೈವಾಹಿಕ ಪ್ರಕರಣ-2, ಭೂಸ್ವಾಧೀನ ಪ್ರಕರಣ-1 ಸಿವಿಲ್ ಪ್ರಕರಣ-115, ಇತರೇ ಕ್ರಿಮಿನಲ್ ಪ್ರಕರಣ- 1501 ಹಾಗೂ ವ್ಯಾಜ್ಯ ಪೂರ್ವ ದಾವೆ-18438) ರಾಜೀ ಮುಖಾಂತರ ಇತ್ಯರ್ಥಪಡಿಸಿ ರೂ.11,11,51,425/- ಪರಿಹಾರದ ಮೊತ್ತವನ್ನು ಘೋಷಿಸಲಾಯಿತು.
13 ವರ್ಷ ದೂರವಾಗಿದ್ದ ದಂಪತಿಗಳ ಮಿಲನ: ಸುಮಾರು 13 ವರ್ಷಗಳಿಂದ ಬೇರೆ ಬೇರೆಯಾಗಿದ್ದ ದಂಪತಿಗಳು ನ್ಯಾಯಾಧೀಶರು ಹಾಗೂ ವಕೀಲರ ಮಧ್ಯಸ್ಥಿಕೆಯಿಂದ ತಮ್ಮ ಮಗಳ ಭವಿಷ್ಯದ ದೃಷ್ಟಿಯಿಂದ ಅವರ ನಡುವೆ ಇದ್ದ ಮನಸ್ತಾಪವನ್ನು ದೂರ ಮಾಡಿ ಒಟ್ಟಾಗಿ ಜೀವನ ನಡೆಸಲು ನಿರ್ಧರಿಸಿರುತ್ತಾರೆ.
ಜನತಾ ನ್ಯಾಯಾಲಯದಲ್ಲಿ ಒಂದಾದ ಅಣ್ಣ ತಮ್ಮಂದಿರು: ಸುಮಾರು 16 ವರ್ಷ ಹಳೆಯದಾದ ಅಣ್ಣ ತಮ್ಮಂದಿರ ನಡುವೆ ಬಾಕಿ ಇದ್ದ ಅಮಲ್ಜಾರಿ ಸಂಖ್ಯೆ 11/17 ರ ಪ್ರಕರಣದಲ್ಲಿ ರೂ.15,00,000/- ಇಬ್ಬರು ಪಕ್ಷಗಾರರು ರಾಜೀ ಸಂಧಾನ ಮಾಡಿಕೊಂಡು ಸಂತಸ ವ್ಯಕ್ತಪಡಿಸಿರುತ್ತಾರೆ.
35 ವರ್ಷ ಹಳೆಯ ವೈಷಮ್ಯ ಅದಾಲತ್ ಮೂಲಕ ಸುಖಾಂತ್ಯ : ಸಂಬಂಧಿಕರ ನಡುವೆ ಸುಮಾರು 35 ವರ್ಷಗಳ ಹಿಂದಿನಿಂದ ವೈಷಮ್ಯ ಇದ್ದು 2017 ರಲ್ಲಿ ಪಾಲು ವಿಭಾಗದ ದಾವೆ ಹೂಡಿದ್ದು ಉಭಯಪಕ್ಷಗಾರರ ವಿಚಾರಣೆ ನಡೆದು ಪ್ರಕರಣವನ್ನು ತೀರ್ಪಿಗಾಗಿ ದಿನಾಂಕ 19-08-2022 ಕ್ಕೆ ಕಾಯ್ದಿರಿಸಲಾಗಿತ್ತು. ಸದರಿ ದಾವೆಯಲ್ಲಿ ಒಟ್ಟು 25 ಜನ ಪಕ್ಷಗಾರರಿದ್ದು ನ್ಯಾಯಾಧೀಶರು, ವಕೀಲರು, ಹಾಗೂ ಹಿರಿಯರ ಸಲಹೆಯಿಂದ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಸಮಕ್ಷಮ ರಾಜೀ ಸಂಧಾನದ ಮೂಲಕ ಪಾಲು ವಿಭಾಗ ಮಾಡಿಕೊಂಡು ತಮ್ಮ ಭಾಗಕ್ಕೆ ಬಂದ ಪಾಲಿನಲ್ಲಿ ದಾರಿಗೆ ಸಮನಾದ ಜಾಗವನ್ನು ಬಿಟ್ಟುಕೊಡಲು ಒಪ್ಪಿಕೊಂಡು ಸೌಹಾರ್ದಯುತವಾಗಿ ಸಂಧಾನ ಮಾಡಿಕೊಂಡಿರುತ್ತಾರೆ.
ಅದಾಲತ್ ನಲ್ಲಿ ಒಂದಾದ ಎರಡು ಜೋಡಿಗಳು : ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ಎರಡು ವೈವಾಹಿಕ ಪ್ರಕರಣದಲ್ಲಿ ದಂಪತಿಗಳು ತಮ್ಮ ವೈಮನಸ್ಸನ್ನು ಮರೆತು ಒಂದಾಗಿರುತ್ತಾರೆ.
ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಉಡುಪಿ, ಕುಂದಾಪುರ ಹಾಗೂ ಕಾರ್ಕಳ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್, ಕಕ್ಷಿಗಾರರು ಹಾಗೂ ಇತರ ಸರ್ಕಾರಿ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಲೋಕ್ ಅದಾಲತ್ ನ್ನು ಯಶಸ್ವಿಗೊಳಿಸಲಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka