17ರ ಬಾಲಕನಿಗೆ 20 ವರ್ಷದ ಯುವತಿಯ ಜೊತೆ ಲವ್ | ಮದುವೆ ಆದ ತಕ್ಷಣವೇ ಶುರುವಾಯ್ತು ಸಂಕಷ್ಟ!
ಚಿಕ್ಕಮಗಳೂರು: ಫೇಸ್ ಬುಕ್ ನಲ್ಲಿ ಶುರುವಾದ ಲವ್ ಮದುವೆವರೆಗೂ ಬಂತು. ಮದುವೆಯೂ ಆಯಿತು. ಆದರೆ, ಮದುವೆಯಾದ ಬಳಿಕ ಈ ಜೋಡಿಗೆ ಇದೀಗ ಸಂಕಷ್ಟ ಶುರುವಾಗಿದ್ದು, ಬಾಲ್ಯ ವಿವಾಹ ಕಾಯ್ದೆಯಡಿ ಇದೀಗ ಪ್ರಕರಣ ದಾಖಲಾಗಿದೆ.
ಬೆಂಗಳೂರು ಮೂಲದ 20 ವರ್ಷ ವಯಸ್ಸಿನ ಯುವತಿಗೆ ಕಡೂರು ತಾಲೂಕಿನ ಬ್ರಹ್ಮಸಮುದ್ರ ಗ್ರಾಮದ 17 ವರ್ಷ ವಯಸ್ಸಿನ ಬಾಲಕನ ಜೊತೆಗೆ ಫೇಸ್ ಬುಕ್ ನಲ್ಲಿ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿದ್ದು, ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದಾರೆ. ಇವರ ವಿವಾಹಕ್ಕೆ ಮನೆಯವರಿಂದಲೂ ಒಪ್ಪಿಗೆ ದೊರೆತಿದೆ.
ಜೂನ್ 16ರಂದು ಬಾಲಕನ ಹುಟ್ಟೂರು ಬ್ರಹ್ಮಸಮುದ್ರ ಗ್ರಾಮದಲ್ಲಿ ವಿವಾಹವಾಗಿದೆ. ಈ ವಿವಾಹದ ಬಳಿಕ 17 ವರ್ಷ ವಯಸ್ಸಿನ ಯುವಕ ಹಾಗೂ 20 ವರ್ಷದ ಯುವತಿಯ ವಿವಾಹ ನಡೆದಿದೆ ಎನ್ನುವ ದೂರು ಜಿಲ್ಲಾ ಮಕ್ಕಳ ಸಹಾಯವಾಣಿಗೆ ಬಂದಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಬಾಲ್ಯ ವಿವಾಹ ನಡೆದಿರುವುದು ಸ್ಪಷ್ಟವಾಗಿದೆ ಎಂದು ವರದಿಯಾಗಿದೆ.
ಇದೀಗ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಯುವತಿ ಸೇರಿದಂತೆ ಯುವತಿ ಪೋಷಕರು ಹಾಗೂ ಯುವಕನ ಪೋಷಕರು ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೊವಿಡ್ ಸಂದರ್ಭ ಕಾರ್ಯಕ್ರಮಕ್ಕೆ ಅನುಮತಿ ಪಡೆಯದೇ ವಿವಾಹ ನಡೆಸಿದ ಬಗ್ಗೆ ಇನ್ನೊಂದು ಕೇಸ್ ಕೂಡ ದಾಖಲಾಗಿದೆ ಎಂದು ತಿಳಿದು ಬಂದಿದೆ.