18 ವರ್ಷದ ದಲಿತ ಯುವತಿಯ ಮೃತದೇಹ ಅನುಮಾನಾಸ್ಪದವಾಗಿ ಪತ್ತೆ
ಉತ್ತರಪ್ರದೇಶ: 18 ವರ್ಷ ವಯಸ್ಸಿನ ದಲಿತ ಯುವತಿಯ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು, ಯುವತಿಗೆ ಕಿರುಕುಳ ನೀಡಿ ಬಳಿಕ ಗಲ್ಲಿಗೇರಿಸಿ ಹತ್ಯೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
18 ವರ್ಷ ವಯಸ್ಸಿನ ಪ್ರೀತಿ ಎಂಬ ದಲಿತ ಯುವತಿ, ತರಕಾರಿ ತರಲು ಶನಿವಾರ ಮಧ್ಯಾಹ್ನ ಮನೆಯಿಂದ ತೆರಳಿದ್ದಳು. ಆದರೆ, ಆಕೆ ಆ ಬಳಿಕ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಆತಂಕಕ್ಕೀಡಾದ ಕುಟುಂಬಸ್ಥರು ಯುವತಿಗಾಗಿ ಹುಡುಕಾಡಿದಾಗ ಇಲ್ಲಿನ ಬೆಲಾಟಾಲ್ ಪ್ರದೇಶದ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಪೊಲೀಸರು ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದಾರೆ. ಇನ್ನೂ ಕಳೆದ ಒಂದು ತಿಂಗಳಿನಿಂದ ಯುವಕನೋರ್ವ ಕರೆ ಮಾಡಿ ಯುವತಿಗೆ ಬೆದರಿಕೆ ಹಾಕುತ್ತಿದ್ದ ಎಂದು ಯುವತಿಯ ಚಿಕ್ಕಮ್ಮ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಸರ್ಕಲ್ ಅಧಿಕಾರಿ ರಾಂಪ್ರವೇಶ್ ರೈ ತಿಳಿಸಿದ್ದಾರೆ.
ಸಂತ್ರಸ್ತ ಯುವತಿ ಪ್ರೀತಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಸಮಸ್ಯೆಗಳಿರಲಿಲ್ಲ. ಆಕೆಗೆ ಕಿರುಕುಳ ನೀಡಿ, ಗಲ್ಲಿಗೇರಿಸಿ ಹತ್ಯೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.