ಭಯಾನಕ: ಜಮ್ಮುವಿನಲ್ಲಿ ಓರ್ವ ಯೋಧ ಸೇರಿ 2 ಮೃತದೇಹ ಪತ್ತೆ; ಉಗ್ರರ ವಿರುದ್ಧದ ಸಮರ ಮತ್ತಷ್ಟು ಬಿರುಸು
ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಗಡೋಲೆ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಆರನೇ ದಿನದಂದು ಎರಡು ಶವಗಳನ್ನು ಪತ್ತೆ ಮಾಡಿವೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಎನ್ ಕೌಂಟರ್ ನಲ್ಲಿ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ ಮೂವರು ಅಧಿಕಾರಿಗಳು ಮತ್ತು ಒಬ್ಬ ಸೈನಿಕನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಎರಡು ಶವಗಳು ಪತ್ತೆಯಾಗಿವೆ. ಮೃತರಲ್ಲಿ ಇವ್ರಲ್ಲಿ ಒಬ್ಬರನ್ನು ಪ್ರದೀಪ್ ಎಂದು ಗುರುತಿಸಲಾಗಿದ್ದು, ಇವರು ಕಳೆದ ಬುಧವಾರ ಭಯೋತ್ಪಾದಕರಿಂದ ಹತ್ಯೆಗೀಡಾದ ಸೈನಿಕ ಎಂದು ಮೂಲಗಳು ತಿಳಿಸಿವೆ. ಮೃತ ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ.
ರಾಷ್ಟ್ರೀಯ ರೈಫಲ್ಸ್ ನ ಕಮಾಂಡಿಂಗ್ ಆಫೀಸರ್ ಕರ್ನಲ್ ಮನ್ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್ ಭಟ್ ಅವರನ್ನು ಭಯೋತ್ಪಾದಕರು ಬುಧವಾರ ಹತ್ಯೆ ಮಾಡಿದ್ದರು. ಎನ್ ಕೌಂಟರ್ ನಡೆದ ಮೊದಲ ದಿನ ಪ್ರದೀಪ್ ನಾಪತ್ತೆಯಾಗಿದ್ದು, ಅವರನ್ನು ಕೊಲ್ಲಲಾಗಿದೆ ಎಂದು ಶಂಕಿಸಲಾಗಿದೆ.
ಕಳೆದ ಆರು ದಿನಗಳಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ನಾಶವಾದ ಭಯೋತ್ಪಾದಕ ಅಡಗುತಾಣಗಳ ಬಳಿ ಸುಟ್ಟ ದೇಹವನ್ನು ಡ್ರೋನ್ ದೃಶ್ಯಾವಳಿಗಳು ತೋರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳು ಈ ಪ್ರದೇಶವನ್ನು ಸ್ಯಾನಿಟೈಸ್ ಮಾಡಿದ ನಂತರವೇ ಅದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬಹುದು.