ಎರಡು ಮದುವೆಯಾದ ತಂದೆ, ತನ್ನ ಮಗನನ್ನೇ ಕಾಲುವೆಗೆ ತಳ್ಳಿ ಹತ್ಯೆ ಮಾಡಿದ!

sigandanuru
30/07/2021

ರಾಯಚೂರು: ಪಾಪಿ ತಂದೆಯೋರ್ವ ತನ್ನ ಸ್ವಾರ್ಥ ಈಡೇರಿಕೆಗಾಗಿ ತನ್ನ ಪುತ್ರನನ್ನು ಕಾಲುವೆಗೆ ತಳ್ಳಿ ಹತ್ಯೆ ಮಾಡಿದ ಅಮಾನವೀಯ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ತುರವಿಹಾಳದಲ್ಲಿ ನಡೆದಿದ್ದು, ಮಗನನ್ನು ನಂಬಿಸಿ ಕಾಲುವೆ ಬಳಿಗೆ  ಆರೋಪಿ ಕರೆದೊಯ್ದಿದ್ದ.

20 ವರ್ಷ ವಯಸ್ಸಿನ ಭೀಮಣ್ಣ ತನ್ನ ತಂದೆಯಿಂದಲೇ ಹತ್ಯೆಗೀಡಾದ ಯುವಕನಾಗಿದ್ದು, ಮಗ ಆಸ್ತಿಯನ್ನು ಮಾರಾಟ ಮಾಡಲು ಬಿಡುತ್ತಿಲ್ಲ ಎಂಬ ಕಾರಣಕ್ಕಾಗಿ ತಂದೆ ಹನುಮಂತ ನಿರಂತರವಾಗಿ ಮಗನೊಂದಿಗೆ ಜಗಳವಾಡುತ್ತಿದ್ದ ಎಂದು ತಿಳಿದು ಬಂದಿದೆ.

ಘಟನೆ ನಡೆದ ದಿನದಂದು ಆರೋಪಿ ಹನುಮಂತ ತನ್ನ ಮಗ ಭೀಮಣ್ಣನನ್ನು ಪ್ರೀತಿಯಿಂದ ಮಾತನಾಡಿಸುತ್ತಾ ಕಾಲುವೆ ಬಳಿಗೆ ಕರೆದೊಯ್ದಿದ್ದು, ಬಳಿಕ ಕಾಲುವೆಗೆ ತಳ್ಳಿದ್ದಾನೆ. ಪರಿಣಾಮವಾಗಿ ಈಜು ತಿಳಿಯ ಭೀಮಣ್ಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಭೀಮಣ್ಣನ ತಂದೆ ಹನುಮಂತ ಎರಡು ಮದುವೆಯಾಗಿದ್ದ. ಹೀಗಾಗಿ ಕೈ ತುಂಬಾ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಆಸ್ತಿ ಮಾರಾಟ ಮಾಡಲು ಮುಂದಾಗಿದ್ದ. ಆದರೆ, ಪುತ್ರ ಭೀಮಣ್ಣ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಎಂದು ಹೇಳಲಾಗಿದೆ.

ಪುತ್ರನನ್ನು ಎದುರು ಹಾಕಿಕೊಂಡು ಆಸ್ತಿ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅರಿತ ಹನುಮಂತ ಮಗನನ್ನು ಮುಗಿಸಲು ಪ್ಲಾನ್ ಮಾಡಿದ್ದಾನೆ. ಆದರೆ ಅಪ್ಪ ತನ್ನನ್ನು ಕೊಲೆ ಮಾಡುವ ಮಟ್ಟಕ್ಕೆ ಇಳಿಯುತ್ತಾನೆ ಎನ್ನುವುದನ್ನು ಯೋಚನೆ ಕೂಡ ಮಾಡದ ಭೀಮಣ್ಣ ತಂದೆಯ ಜೊತೆಗೆ ಕಾಲುವೆ ಬಳಿಗೆ ಹೋಗಿದ್ದು, ಇದೀಗ ತಂದೆಯ ಕೈಯಿಂದಲೇ ಹತ್ಯೆಗೀಡಾಗಿದ್ದಾನೆ. ಸದ್ಯ ಆರೋಪಿ ಹನುಮಂತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version