29 ವರ್ಷದ ಸಬ್ ಇನ್ಸ್ ಪೆಕ್ಟರ್ ಕೊರೊನಾಕ್ಕೆ ಬಲಿ | ಕೊನೆಯ ಕ್ಷಣದಲ್ಲಿಯೂ ಆಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ!
23/04/2021
ನವದೆಹಲಿ: 29 ವರ್ಷ ವಯಸ್ಸಿನ ದೆಹಲಿಯ ಸಬ್ ಇನ್ಸ್ ಪೆಕ್ಟರ್ ಒಬ್ಬರು ಕೊರೊನಾ ವೈರಸ್ ಗೆ ಬಲಿಯಾಗಿದ್ದು, ಮಧ್ಯ ವಯಸ್ಕರನ್ನು ಕೂಡ ಇದೀಗ ಕೊರೊನಾ ಕಾಡುತ್ತಿರುವುದು ಯುವಜನತೆಯಲ್ಲಿಯೂ ಆತಂಕವನ್ನು ಸೃಷ್ಟಿಸಿದೆ.
ಅಂಕಿತ್ ಚೌಧರಿ ಮೃತ ಎಸ್ ಐ ಆಗಿದ್ದು, ಅವರಿಗೆ ಏಪ್ರಿಲ್ 15ರಂದು ಕೊರೊನಾ ಪಾಸಿಟಿವ್ ಬಂದಿತ್ತು. ಶುಕ್ರವಾರ ಘಾಜಿಯಾಬಾದ್ ನಲ್ಲಿ ಅಂಕಿತ್ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ತೊಂದರೆಗೊಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕುಟುಂಬಸ್ಥರು ಪ್ರಯತ್ನಿಸಿದ್ದಾರೆ. ಆದರೆ ಅವರಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ. ಕೊನೆಗೆ ತೀವ್ರವಾಗಿ ಅಸ್ವಸ್ಥರಾದ ಅವರು, ಮೃತಪಟ್ಟಿದ್ದಾರೆ ಎಂದು ಅಂಕಿತ್ ಅವರ ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ.
ಅಂಕಿತ್ ಅವರಿಗೆ ಶ್ವಾಸಕೋಶದವರೆಗೆ ಕೊರೊನಾ ಹರಡಿತ್ತು ಎಂದು ಹೇಳಲಾಗಿದೆ. ಪೊಲೀಸ್ ಅಧಿಕಾರಿಗಳಿಗೇ ಆಸ್ಪತ್ರೆಗಳಲ್ಲಿ ಬೆಡ್ ಸಿಗದಿದ್ದರೆ, ಇನ್ನು ಜನಸಾಮಾನ್ಯರ ಸ್ಥಿತಿ ಏನು ಎಂದು ಜನರು ಪ್ರಶ್ನಿಸುತ್ತಿದ್ದಾರೆ.