ಎರಡನೇ ಪತ್ನಿಯ ಮಾತು ಕೇಳಿ ತನ್ನ ಸ್ವಂತ ಮಕ್ಕಳಿಗೆ ತಂದೆ ಮಾಡಿದ್ದೇನು ಗೊತ್ತಾ?
ಬೆಂಗಳೂರು: ಎರಡನೇ ಪತ್ನಿಯ ಮಾತು ಕೇಳಿ ತಂದೆಯೋರ್ವ ತನ್ನ ಮೊದಲ ಪತ್ನಿಯ ಮಕ್ಕಳಿಗೆ ನಿರಂತರವಾಗಿ ಚಿತ್ರಹಿಂಸೆ ನೀಡಿದ ಘಟನೆ ನಡೆದಿದ್ದು, ಇದೀಗ ಸ್ಥಳೀಯರ ಮಾಹಿತಿಯಂತೆ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸೆಲ್ವರಾಜ್ ಬಂಧಿತ ಆರೋಪಿಯಾಗಿದ್ದು, ಮಕ್ಕಳು ಹಠ ಮಾಡುತ್ತಾರೆ, ಹೇಳಿದ ಮಾತು ಕೇಳುವುದಿಲ್ಲ ಎಂದು ಎರಡನೇ ಪತ್ನಿ ಹೇಳಿದ ಮಾತನ್ನು ಕೇಳಿ ತನ್ನ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಈತ ಕ್ರೌರ್ಯ ಮೆರೆದಿದ್ದಾನೆ.
ಮಕ್ಕಳ ಕಾಲು, ಭುಜ, ಮೊಣಕೈ, ಮುಖ, ಪಾದಗಳಿಗೆ ಚಾಕುವಿನಿಂದ ಬರೆ ಹಾಕಿದ್ದಾನೆ. ಈತನ ಚಿತ್ರಹಿಂಸೆ ತಾಳಲಾರದೇ ಮಕ್ಕಳು ತಪ್ಪಿಸಿಕೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇದನ್ನು ಗಮನಿಸಿದ ನೆರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೂರು ತಿಂಗಳ ಹಿಂದೆ ಸೆಲ್ವರಾಜ್ ಮೊದಲ ಪತ್ನಿ ಮೃತಪಟ್ಟಿದ್ದರು. ಮೂವರು ಮಕ್ಕಳಿದ್ದು, ಎರಡನೇ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ ಸೆಲ್ವ ಆಕೆಯ ಮಾತು ಕೇಳಿ ಮಕ್ಕಳ ಮೇಲೆ ಕ್ರೌರ್ಯ ಮೆರೆದಿದ್ದಾನೆ.
ಜೆಪಿ ನಗರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮೂವರು ಮಕ್ಕಳಿಗೆ ಬಾಲಭವನದಲ್ಲಿ ಆಶ್ರಯ ನೀಡಲಾಗಿದೆ ಎಂದು ವರದಿಯಾಗಿದೆ.