ಹಾಸಿಗೆಗಳ ಕೊರತೆ: 3 ಗಂಟೆ ಆಕ್ಸಿಜನ್ ಸಿಲಿಂಡರ್ ಹಿಡಿದುಕೊಂಡು ಕುರ್ಚಿಯಲ್ಲಿ ಕುಳಿತ ಕೊವಿಡ್ ರೋಗಿ!

ಛತ್ತೀಸ್ ಗಢ: ಛತ್ತೀಸ್ ಗಢದಲ್ಲಿ ಕೊರೊನಾ ರೋಗಿಗಳ ಸ್ಥಿತಿ ಕರುಣಾಜನಕವಾಗಿದ್ದು, ಮೂಲ ಸೌಕರ್ಯಗಳಿಲ್ಲದೇ ಆಸ್ಪತ್ರೆಯ ಸಿಬ್ಬಂದಿ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗದೇ ಪರದಾಡುತ್ತಿದ್ದಾರೆ.
ಈ ನಡುವೆ ಮಹಾಸಮುಂಡ್ ನ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತ ಯುವಕನೊಬ್ಬ ಆಸ್ಪತ್ರೆಯಲ್ಲಿ ಖಾಲಿ ಹಾಸಿಗೆಗಳಿಲ್ಲದ ಕಾರಣ ಮೂರು ಗಂಟೆಗಳ ಕಾಲ ಆಮ್ಲಜನಕ ಸಿಲಿಂಡರ್ ನೊಂದಿಗೆ ಕುರ್ಚಿಯ ಮೇಲೆಯೇ ಕುಳಿತಿದ್ದ ದೃಶ್ಯ ಕಂಡು ಬಂದಿದೆ.
ಮಹಾಸಮುಂಡ್ ನ ಯುವಕನೊಬ್ಬನಿಗೆ ಕೊರೊನಾ ದೃಢಪಟ್ಟಿದ್ದು, ಉಸಿರಾಟದ ತೊಂದರೆಯಿಂದಾಗಿ ಆತ ಜಿಲ್ಲಾ ಆಸ್ಪತ್ರೆಗೆ ತಲುಪಿದ್ದ. ಹಾಸಿಗೆಗಳು ಖಾಲಿಯಾಗಿಲ್ಲದ ಕಾರಣ, ಆಸ್ಪತ್ರೆಯಲ್ಲಿ ಆತನಿಗೆ ಆಮ್ಲಜನಕದ ಸಿಲಿಂಡರ್ ನೀಡಿ ಆವರಣದಲ್ಲಿರುವ ಕುರ್ಚಿಯ ಮೇಲೆ ಕೂರಿಸಲಾಗಿದೆ.
ಘಟನೆಯ ಕುರಿತು ಭಾರೀ ಆಕ್ರೋಶದ ನಂತರ, ಆಸ್ಪತ್ರೆಯು ಯುವಕನಿಗೆ ಹಾಸಿಗೆಯ ವ್ಯವಸ್ಥೆ ಮಾಡಿ, ಚಿಕಿತ್ಸೆ ಮುಂದುವರಿಸಿದೆ ಎಂದು ತಿಳಿದು ಬಂದಿದೆ. ಕೇಂದ್ರ ಸರ್ಕಾರದ ತೀವ್ರ ನಿರ್ಲಕ್ಷ್ಯದ ಬಗ್ಗೆ ವ್ಯಾಪಕ ಆಕ್ರೋಶ ಕೂಡ ದೇಶಾದ್ಯಂತ ಕೇಳಿ ಬಂದಿದೆ.