ಉಚ್ಚಿಲದ ಖಾಸಗಿ ರೆಸಾರ್ಟ್ ನ ಈಜುಕೊಳದಲ್ಲಿ ಮೈಸೂರು ಮೂಲದ 3 ಯುವತಿಯರು ಜಲಸಮಾಧಿ!
ಮಂಗಳೂರು: ನಗರದ ಹೊರವಲಯದ ಉಚ್ಚಿಲದ ಖಾಸಗಿ ರೆಸಾರ್ಟ್ ನ ಈಜುಕೊಳದಲ್ಲಿ ಮೂವರು ಯುವತಿಯರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೈಸೂರು ವಿಜಯ ನಗರದ ದೇವರಾಜ್ ಮೊಹಲ್ಲಾ ನಿವಾಸಿ ನವೀನ್ ಕುಮಾರ್ ಎಂಬವರ ಪುತ್ರಿ ಕೀರ್ತನಾ ಎನ್.(21), ಮೈಸೂರು ಕುರುಬರಹಳ್ಳಿ 4ನೇ ಕ್ರಾಸ್ ನಿವಾಸಿ ಮಲ್ಲೇಶ್ ಎಂಬವರ ಪುತ್ರಿ ನಿಶಿತಾ ಎಂ.ಡಿ.(21) ಹಾಗೂ ಮೈಸೂರು ಮೊಹಲ್ಲಾದ ರಾಮಾನುಜ ರಸ್ತೆಯ 11ನೇ ಕ್ರಾಸ್ ನಿವಾಸಿ ಎಂ.ಎನ್.ಶ್ರೀನಿವಾಸ್ ಎಂಬವರ ಪುತ್ರಿ ಪಾರ್ವತಿ ಎಸ್. (20) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಮೂವರಿಗೂ ಈಜು ಬರುತ್ತಿರಲಿಲ್ಲ, ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಾ, ಕೈಕೈ ಹಿಡಿದು ಮುಂದೆ ಹೋಗಿದ್ದು, ಸ್ವಿಮ್ಮಿಂಗ್ ಫೂಲ್ ನಲ್ಲಿದ್ದ ಟ್ಯೂಬ್ ಎತ್ತಿಕೊಳ್ಳಲು ಒಬ್ಬಳು ಯತ್ನಿಸಿದ್ದಾಳೆ, ಈ ವೇಳೆ ಆಕೆ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾಳೆ. ಈ ವೇಳೆ ಆಕೆಯನ್ನು ರಕ್ಷಿಸಲು ಇನ್ನಿಬ್ಬರು ಇಳಿದಿದ್ದು ಅವರೂ ನೀರಲ್ಲಿ ಮುಳುಗಿದ್ದಾರೆ. ಸಾಕಷ್ಟು ಕೂಗಾಡಿದರೂ ಅಲ್ಲಿ ರಕ್ಷಣೆ ಮಾಡುವವರು ಯಾರೂ ಇರಲಿಲ್ಲ. ಹೀಗಾಗಿ ಮೂವರು ಯುವತಿಯರೂ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರೆಸಾರ್ಟ್ ಮಾಲಿಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ರೆಸಾರ್ಟ್ ನಿಯಮ ಪಾಲಿಸದೇ ಇರುವುದೇ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಸದ್ಯ ರೆಸಾರ್ಟ್ ನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q