ಲಂಚದ ಹಣ ಪಡೆದದ್ದೇ ಮುಳುವಾಯಿತು: ನಾಲ್ವರು ಪೊಲೀಸರಿಗೆ ಅಮಾನತು ಶಿಕ್ಷೆ
ಜಾರ್ಖಂಡ್ ನ ರಾಮಗಢ ಜಿಲ್ಲೆಯಲ್ಲಿ ಅಕ್ರಮವಾಗಿ ಕಲ್ಲಿದ್ದಲು ಸಾಗಿಸುತ್ತಿದ್ದ ವಾಹನದಿಂದ ಲಂಚವಾಗಿ ರಸ್ತೆಯಲ್ಲಿ ಎಸೆಯಲಾದ ಕರೆನ್ಸಿ ನೋಟುಗಳನ್ನು ಎತ್ತಿಕೊಂಡ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾದ ನಂತರ ಸಹಾಯಕ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಂತರ ಪೊಲೀಸರು ಕ್ರಮ ಕೈಗೊಂಡು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಗಸ್ತು ಕರ್ತವ್ಯದಲ್ಲಿದ್ದ ನಾಲ್ವರು ಪೊಲೀಸ್ ಸಿಬ್ಬಂದಿ ಅಕ್ರಮವಾಗಿ ಕಲ್ಲಿದ್ದಲು ಸಾಗಿಸುತ್ತಿದ್ದ ಮೋಟಾರ್ ಸೈಕಲ್ ಸವಾರನಿಂದ ರಸ್ತೆಯಲ್ಲಿ ಎಸೆಯಲಾದ ಹಣವನ್ನು ಲಂಚವಾಗಿ ತೆಗೆದುಕೊಳ್ಳುವ ವೀಡಿಯೊವನ್ನು ನಾವು ಗಮನಿಸಿದ್ದೇವೆ ಮತ್ತು ಈ ಬಗ್ಗೆ ತಕ್ಷಣ ತನಿಖೆಗೆ ಆದೇಶಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪಿಯೂಷ್ ಪಾಂಡೆ ತಿಳಿಸಿದ್ದಾರೆ.
ರಾಮಗಢ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಒ) ಕಿಶೋರ್ ಕುಮಾರ್ ರಜಾಕ್ ನೇತೃತ್ವದ ತನಿಖೆಯಲ್ಲಿ ನಾಲ್ವರು ಪೊಲೀಸರು ಲಂಚ ಪಡೆದ ಆರೋಪಗಳು ನಿಜವೆಂದು ತಿಳಿದುಬಂದಿದೆ ಎಂದು ಅವರು ಹೇಳಿದರು. ನಂತರ ಪೊಲೀಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಪಾಂಡೆ ಹೇಳಿದರು.
ಇಂತಹ ಕ್ರಮಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಸ್ಪಿ ಹೇಳಿದ್ದಾರೆ.