ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ 44ನೇ ಚೆಸ್ ಒಲಿಂಪಿಯಾಡ್ ರಿಲೇ ಜ್ಯೋತಿ: ಮಂಗಳೂರು ಮೇಯರ್ ಸ್ವಾಗತ
ಮಂಗಳೂರು: 44ನೇ ಚೆಸ್ ಒಲಿಂಪಿಯಾಡ್ ರಿಲೇ ಜ್ಯೋತಿ ಜಿಲ್ಲೆಗೆ ಆಗಮಿಸಿರುವುದು ಐತಿಹಾಸಿಕ ಕ್ಷಣವಾಗಿದೆ ಎಂದು ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಅಭಿಪ್ರಾಯಪಟ್ಟರು.
ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಜು.19ರ ಮಂಗಳವಾರ ಬೆಳಿಗ್ಗೆ 44ನೇ ಚೆಸ್ ಒಲಿಂಪಿಯಾಡ್ ನ ರಿಲೇ ಜ್ಯೋತಿಯನ್ನು ಸ್ವಾಗತಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದಾದ್ಯಂತ ಚೆಸ್ ಒಲಿಂಪಿಯಾಡ್ ರಿಲೇ ಜ್ಯೋತಿಯ ಆಗಮನವಾಗುತ್ತಿದೆ, ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಹಾಗೂ 75 ಜಿಲ್ಲಾ ಕೇಂದ್ರಗಳಲ್ಲಿ ಒಲಂಪಿಯಾಡ್ ರಿಲೇ ಜ್ಯೋತಿ ಸಂಚರಿಸಲಿದೆ, ರಾಜ್ಯದ ಬೆಂಗಳೂರು ಮತ್ತು ಮಂಗಳೂರಿಗೆ ಈ ಸುವರ್ಣಾವಕಾಶ ದೊರೆತಿರುವುದು ಸೌಭಾಗ್ಯವಾಗಿದೆ. ಇಂದು ಬೆಳಗಿದ ಕ್ರೀಡಾ ಜ್ಯೋತಿ ದೇಶದಾದ್ಯಂತ ಇನ್ನಷ್ಟು ಪ್ರತಿಭೆಗಳ ಬದುಕಿಗೆ ಬೆಳಕು ನೀಡಲಿ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಭಾರತದಲ್ಲೇ ಜನ್ಮ ತಾಳಿದ ಈ ಕ್ರೀಡೆಗೆ ಕೇಂದ್ರ ಸರ್ಕಾರ ಅದ್ದೂರಿ ಬೆಂಬಲ ನೀಡುತ್ತಿರುವುದು ಸಂತಸದ ಸಂಗತಿ. ದೇಶದಲ್ಲಿ ಮೊದಲ ಬಾರಿಗೆ ಚೆಸ್ ಒಲಂಪಿಯಾಡ್ ಟಾರ್ಚ್ ರಿಲೇ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ಇದಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕ ಇನ್ನಷ್ಟು ಪ್ರತಿಭಾವಂತ ಯುವ ಜನರು ಈ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಶುಭಹಾರೈಸಿದರು.
ಕರ್ನಾಟಕ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಮಾತನಾಡಿ, ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆಗಳಲ್ಲಿ ಚದುರಂಗದಾಟವು ಒಂದು. ಅದು ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುತ್ತಿದೆ. ಸರ್ಕಾರದ ಇದಕ್ಕೆ ನೀಡುತ್ತಿರುವ ಪ್ರೋತ್ಸಾಹದಿಂದಾಗಿ ಚೆಸ್ ದ್ರುವತಾರೆಗಳು ಬೆಳಕಿಗೆ ಬರಲಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಯೆನೆಪೊಯ ವಿವಿಯ ಉಪ ಕುಲಪತಿ ಡಾ.ಎಂ. ವಿಜಯ ಕುಮಾರ್, ಗ್ರಾಂಡ್ ಮಾಸ್ಟರ್ ಗಳಾದ ತೇಜ ಕುಮಾರ್, ಜಿ.ಎ ಸ್ಟಾನಿ, ಚೆಸ್ ಫೆಡರೇಷನ್ ಅಧ್ಯಕ್ಷ ರಮೆಶ್ ಕೋಟೆ, ಎನ್.ಎಸ್.ಎಸ್ ಪ್ರೋಗ್ರಾಂ ಕೋ-ಆರ್ಡಿನೇಟರ್ ಡಾ.ಅಶ್ವಿನಿ ಶೆಟ್ಟಿ, ನೆಹರೂ ಯುವ ಕೇಂದ್ರದ ಅಧಿಕಾರಿಗಳಾದ ವಿಷ್ಣುಮೂರ್ತಿ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್, ಭಾರತೀಯ ಚೆಸ್ ಫೆಡರೇಷನ್‍ನ ಜಿಲ್ಲಾ ಅಧ್ಯಕ್ಷ ರಾಜಗೋಪಾಲ್ ಶೆಣೈ, ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿ ರಘುವೀರ್ ಸೂಟರ್ ಪೇಟೆ ಸೇರಿದಂತೆ, ಎನ್.ಸಿ.ಸಿ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka