ದುರಂತ: ಮೆಲ್ಬೋರ್ನ್ ನಲ್ಲಿ ಪಬ್ ಗೆ ಕಾರು ಡಿಕ್ಕಿ; 5 ಭಾರತೀಯ ಮೂಲದವರು ಸಾವು

ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಪಬ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಭಾರತೀಯ ಮೂಲದ ಎರಡು ಕುಟುಂಬಗಳಿಗೆ ಸೇರಿದವರು ಎಂದು news.com.au ವರದಿ ಮಾಡಿದೆ.
ಮೆಲ್ಬೋರ್ನ್ ನ ವಾಯುವ್ಯದಲ್ಲಿರುವ ಗ್ರಾಮೀಣ ವಿಕ್ಟೋರಿಯಾದ ಡೇಲ್ಸ್ಫೋರ್‌ನಲ್ಲಿ ಈ ಘಟನೆ ನಡೆದಿದೆ. ರಾಯಲ್ ಡೇಲ್ಸ್ ಫೋರ್ಡ್ ಹೋಟೆಲ್ ನ ಮುಂಭಾಗದ ಹುಲ್ಲುಹಾಸಿನಲ್ಲಿ ಬಿಳಿ ಬಣ್ಣದ ಬಿಎಂಡಬ್ಲ್ಯು ಎಸ್ ಯುವಿ ಪಾದಚಾರಿ ಮಾರ್ಗವನ್ನು ಹತ್ತಿ ಜನರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವಿಕ್ಟೋರಿಯನ್ ಮುಖ್ಯ ಪೊಲೀಸ್ ಆಯುಕ್ತ ಶೇನ್ ಪ್ಯಾಟನ್ ತಿಳಿಸಿದ್ದಾರೆ. ಮೃತರನ್ನು ವಿವೇಕ್ ಭಾಟಿಯಾ (38), ಅವರ ಮಗ ವಿಹಾನ್ (11), ಪ್ರತಿಭಾ ಶರ್ಮಾ (44), ಅವರ ಮಗಳು ಅನ್ವಿ (9) ಮತ್ತು ಪಾಲುದಾರ ಜತಿನ್ ಚುಗ್ (30) ಎಂದು ಗುರುತಿಸಲಾಗಿದೆ.
ಅನ್ವಿಯನ್ನು ಮೆಲ್ಬೋರ್ನ್ ನ ಆಲ್ಫ್ರೆಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಭಾಟಿಯಾ ಅವರ 36 ವರ್ಷದ ಪತ್ನಿ ರುಚಿ ಮತ್ತು ಆರು ವರ್ಷದ ಮಗ ಅಬೀರ್ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿ ತಿಳಿಸಿದೆ. ಆರಂಭದಲ್ಲಿ ಕಾಲು ಮುರಿತ ಮತ್ತು ಗಾಯಗಳೊಂದಿಗೆ ಅಬೀರ್ ಗಂಭೀರ ಸ್ಥಿತಿಯಲ್ಲಿದ್ದರು. ತದನಂತರ ಅವರನ್ನು ಸ್ಥಿರಗೊಳಿಸಲಾಗಿದೆ.
ಅಪಘಾತದಲ್ಲಿ ಮಗು ಸೇರಿದಂತೆ ಇನ್ನೂ ಅನೇಕರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಬಿಎಂಡಬ್ಲ್ಯೂ ಕಾರಿನ ಚಾಲಕ ಮೌಂಟ್ ಮೆಸೆಡಾನ್ ನ 66 ವರ್ಷದ ವ್ಯಕ್ತಿಯನ್ನು ಸಹ ಆಸ್ಪತ್ರೆಗೆ ಸೇರಿಸಲಾಗಿದೆ. ತನಿಖೆ ನಡೆಯುತ್ತಿದೆ.