ಲೈಂಗಿಕ ಕಿರುಕುಳ ನೀಡಿ, ಶಿಕ್ಷೆ ಪಡೆದು ಬಂದವ 5 ವರ್ಷದ ಬಾಲಕಿಯ ಅತ್ಯಾಚಾರ ಎಸಗಿ ಕೊಂದ!
ಮೊರೆನಾ: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷ ಅನುಭವಿಸಿ ಬಂದಿದ್ದ ಆರೋಪಿ, ಜೈಲಿನಿಂದ ಬಂದು ಮತ್ತೆ ಅದೇ ಕೆಲಸ ಮುಂದುವರಿಸಿದ್ದು, 5 ವರ್ಷದ ಬಾಲಕಿಯನ್ನು ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದಾನೆ.
36 ವರ್ಷದ ದುಷ್ಟ ಬಂಟಿ ರಾಜಕ್ ಆರೋಪಿಯಾಗಿದ್ದಾನೆ. ಸಬಲ್ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 5 ವರ್ಷದ ಬಾಲಕಿ ಗುರುವಾರ ಸಂಜೆ ನಾಪತ್ತೆಯಾಗಿದ್ದು, ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ನಂತರ ಊರಿನ ಹೊರವಲಯದ ಹೊಲದಲ್ಲಿ ರಕ್ತದ ಮಡುವಿನಲ್ಲಿ ಬಾಲಕಿ ಬಿದ್ದಿರುವುದು ಪತ್ತೆಯಾಗಿತ್ತು.
ಘಟನಾ ಸ್ಥಳಕ್ಕೆ ಧಾವಿಸಿ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ವೇಳೇ ಅನುಮಾನದ ಮೇಲೆ ಬಂಟಿ ರಾಜಕ್ ನನ್ನು ಬಂಧಿಸಿದ್ದರು. ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಿಸಿದಾಗ ಆರೋಪಿಯು ತಾನೇ ಬಾಲಕಿಯನ್ನು ಅತ್ಯಾಚಾರ ನಡೆಸಿ ಹತ್ಯೆ ನಡೆಸಿರುವುದಾಗಿ ಹೇಳಿದ್ದಾನೆ.
ಆರೋಪಿ ಬಂಟಿ ರಾಜಕ್ ಸಂತ್ರಸ್ತ ಬಾಲಕಿಯ ಚಿಕ್ಕಮ್ಮನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಆರು ತಿಂಗಳು ಜೈಲು ವಾಸ ಅನುಭವಿಸಿ 10 ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ. ಜೈಲಿನಿಂದ ಬಂದ ಬಳಿಕ ಘೋರ ಕೃತ್ಯವನ್ನು ಎಸಗಿದ್ದಾನೆ.
ಇನ್ನೂ ಆರೋಪಿಯ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಸಂಬಂಧಿತ ವಿಭಾಗಗಳು ಹಾಗೂ ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿ ಆತನನ್ನು ಬಂಧಿಸಲಾಗಿದೆ ಎಂದು ಸಬಲ್ಗಢ ಠಾಣೆ ಉಸ್ತುವಾರಿ ನರೇಂದ್ರ ಶರ್ಮಾ ತಿಳಿಸಿದ್ದಾರೆ.
ಬಾಲಕಿಯನ್ನು ಅತ್ಯಾಚಾರ ನಡೆಸಿ, ಹತ್ಯೆ ನಡೆಸಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಆರೋಪಿ ರಾಜಕ್ ನ ಮನೆಯ ಮೇಲೆ ದಾಳಿಗೆಯ ಯತ್ನಿಸಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.