ಕೆಲಸ ಇಲ್ಲದವನು ಅದೇನೋ ಮಾಡಿದ್ನಂತೆ! | ಸಿನಿಮಾ ಮಂದಿರದಲ್ಲಿ 50 ಶೇ. ಸೀಟ್ ಭರ್ತಿ ಮಾಡಿದ್ರೆ ಕೊರೊನಾ ಬರಲ್ವ?
ಸಿನಿಡೆಸ್ಕ್: ಕೊರೊನಾ ವೈರಸ್ ನಿಂದ ತತ್ತರಿಸಿದ್ದ ದೇಶ ಮತ್ತೆ ಚೇತರಿಸಿಕೊಳ್ಳುತ್ತಿದೆ ಎನ್ನುವುದರೊಳಗೆ ಮತ್ತೆ ಕೊರೊನಾ ಅಲೆಯ ಬಗ್ಗೆ ಸುದ್ದಿ ಕೇಳಿ ಬಂದಿದೆ. ಈ ನಡುವೆ ಸತ್ತು ಹೋಗಿದ್ದ ಚಿತ್ರರಂಗ ಪುನರ್ಜೀವನ ಪಡೆಯುತ್ತಿದ್ದಂತೆಯೇ ಬಿಬಿಎಂಪಿ ಸಿನಿಮಾ ಮೇಲೆ ಶೇ.50 ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ನೀಡಬೇಕು ಎನ್ನುವ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಕೊರೊನಾ ವೈರಸ್ ದೇಶವನ್ನು ಆವರಿಸಿದ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಮೂರ್ಖತನದ ನಿರ್ಧಾರದಿಂದ ಜನತೆ ಇನ್ನೂ ಕೂಡ ಚೇತರಿಸಿಕೊಂಡಿಲ್ಲ. ಕೊರೊನಾ ಆರಂಭದಲ್ಲಿ ಸಾರ್ವಜನಿಕರ ಮೇಲೆ ಲಾಠಿ ಬೀಸಿದ್ದ ಸರ್ಕಾರ, ಇನ್ನಿಲ್ಲದ ಚಿತ್ರ ಹಿಂಸೆ ನೀಡಿತ್ತು. ಇವೆಲ್ಲವನ್ನು ದಾಡಿ ಲಾಕ್ ಡೌನ್ ಎನ್ನುವ ವನ ವಾಸವನ್ನೂ ಮುಗಿಸಿ ಬಂದರೂ ಜನತೆಗೆ ಇನ್ನೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೊರೊನಾದ ವಿಚಾರದಲ್ಲಿ ಮತ್ತೆ ಮತ್ತೆ ಸಾರ್ವಜನಿಕರನ್ನು ಚುಚ್ಚುತ್ತಲೇ ಇದೆ.
ಕೊರೊನಾ ಲಸಿಕೆ ಬಂದಿದ್ದರೂ, ಸರ್ಕಾರ ಇನ್ನು ಕೂಡ ಆತಂಕ ವ್ಯಕ್ತಪಡಿಸುತ್ತಿದೆ. ಹಾಗಿದ್ದರೆ ಕೊರೊನಾ ಲಸಿಕೆ ಕೆಲಸ ಮಾಡುತ್ತಿಲ್ಲವೇ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಸಿನಿಮಾಕ್ಕೆ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ನೀಡುವ ಬಿಬಿಎಂಪಿ ಪ್ರಸ್ತಾಪ ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಶಾಲಾ ಕಾಲೇಜುಗಳು ಆರಂಭವಾಗಿವೆ. ಬಸ್ ಗಳನ್ನು ನೂರಾರು ಜನರು ಓಡಾಡುತ್ತಿದ್ದಾರೆ. ಮಾಲ್ ಗಳು ತೆರೆದಿವೆ. ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತಿವೆ. ರಾಜಕೀಯ ಸಮಾವೇಶಗಳು ನಡೆಯುತ್ತಿವೆ. ಇವೆಲ್ಲದಕ್ಕೆ ಇಲ್ಲದ ನೀತಿ ನಿಯಮ ಸಿನಿಮಾ ಮಂದಿರಕ್ಕೆ ಏಕೆ ಎಂದು ಜನರು ಹಾಗೂ ಚಿತ್ರರಂಗದವರು ಪ್ರಶ್ನಿಸುತ್ತಿದ್ದಾರೆ.
ಸರ್ಕಾರ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ಎಂದು ಮತ್ತೆ ತೀರ್ಮಾನ ಕೈಗೊಳ್ಳಲು ಹೋದರೆ, ಎಷ್ಟೋ ಕಲಾವಿದರು ಬೀದಿಗೆ ಬರುವ ಸಾಧ್ಯತೆಗಳಿವೆ. ಸಿನಿಮಾಕ್ಕೆ ಹಣ ಸುರಿದಿರುವ ನಿರ್ಮಾಪಕರ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸಂದಿಗ್ಧತೆಯಲ್ಲಿ ಬಂದು ನಿಲ್ಲುವ ಸಾಧ್ಯತೆ ಇದೆ. ಇದ್ಯಾವುದರ ಬಗ್ಗೆಯೂ ಯೋಚಿಸದೇ ಸಿಎಂಗೆ ಪ್ರಸ್ತಾಪ ಕಳಿಸಿರುವ ಬಿಬಿಎಂಪಿಗೆ ನಿಜವಾಗಿಯೂ ಮಾನವೀಯತೆ ಇಲ್ಲವೇ? ಎಂಬ ಆಕ್ರೋಶಗಳು ಕೇಳಿ ಬಂದಿವೆ. ಜನರು ಕೊರೊನಾದೊಂದಿಗೆ ಬದುಕಲು ಕಲಿತಿದ್ದಾರೆ. ಸರ್ಕಾರ ಜನರನ್ನು ನೆಮ್ಮದಿಯಿಂದ ಬದುಕಿಸಲು ಇನ್ನೂ ಕಲಿತಿಲ್ಲ. ಕೊರೊನಾ ಹಾಗೆಯೂ ಹರಡುವ ಭಯ ಇದ್ದರೆ, ಶೇ.50 ಸೀಟು ಭರ್ತಿ ಮಾಡಿದ್ದರೂ ಕೊರೊನಾ ಹರಡುತ್ತದೆ ಅಲ್ಲವೇ? ಎಂಬ ಆಕ್ರೋಶಗಳು ಕೇಳಿ ಬಂದಿವೆ.