510 ಕೋ. ರೂ.ಗೆ ಹರಾಜಾದ ಮದ್ಯದಂಗಡಿ | ಅಷ್ಟಕ್ಕೂ ಈ ಮದ್ಯದಂಗಡಿಯಲ್ಲಿ ಏನಿದೆ ವಿಶೇಷ?
ಹನುಮಾನ್ ಗಢ: ರಾಜಸ್ತಾನದ ಹನುಮಾನ್ ಗಢ ಜಿಲ್ಲೆಯ ನೊಹಾಹರ್ ನಲ್ಲಿ ಮದ್ಯದಂಗಡಿಯೊಂದು ಬರೋಬ್ಬರಿ 510 ಕೋಟಿ ರೂಪಾಯಿಗೆ ಹರಾಜಾಗುವ ಮೂಲಕ ಇಡೀ ದೇಶದ ಗಮನ ಸೆಳೆದಿದೆ.
ಅಂಗಡಿಯ ಮೂಲ ಬೆಲೆ 72 ಲಕ್ಷ ರೂಪಾಯಿ ಆಗಿತ್ತು. ಆದರೆ 510 ಕೋಟಿ ರೂಪಾಯಿಗೆ ಈ ಮದ್ಯದಂಗಡಿ ಮಾರಾಟವಾಗಿದೆ. ಈ ಗ್ರಾಮದಲ್ಲಿ ಈ ಬಾರ್ ಬಹಳ ಫೇಮಸ್ ಆಗಿದ್ದು, ಇಲ್ಲಿ ಎಲ್ಲಾ ಮಾದರಿಯ ಮದ್ಯಗಳು ಕೂಡ ದೊರೆಯುತ್ತಿದ್ದವಂತೆ, ಈ ಕಾರಣ ಇಷ್ಟೊಂದು ಬೆಲೆಗೆ ಹರಾಜಾಗಿದೆ.
ನಸುಕಿನ ಜಾವ ಬಿಡ್ಡಿಂಗ್ ಆರಂಭವಾಗಿದೆ. ಒಂದು ದಿನ ಇಡೀ ಬಿಡ್ಡಿಂಗ್ ಮುಂದುವರಿದಿದ್ದು, ಮರುದಿನ ಬಿಡ್ಡಿಂಗ್ ಪ್ರಕ್ರಿಯೆ ಮುಗಿದಿದೆ. ಈ ಬಾರ್ ನ್ನು ಕೊಳ್ಳಲು ಸಾಕಷ್ಟು ಸಂಖ್ಯೆಯ ಜನರು ಕ್ಯೂ ನಿಂತಿದ್ದಾರೆ. ಕೊನೆಗೆ 510 ಕೋ.ರೂ. ಬೆಲೆಗೆ ಈ ಅಂಗಡಿ ಹರಾಜಾಗಿದೆ.
ರಾಜಸ್ಥಾನದಲ್ಲಿ ಮದ್ಯದಂಗಡಿಗಳನ್ನು ಹರಾಜು ಹಾಕುವ ಪ್ರಕ್ರಿಯೆ ಹಿಂದಿನಿಂದಲೂ ನಡೆದುಕೊಂಡು ಬಂದಿತ್ತು. ಆದರೆ, ವಸುಂಧರಾ ರಾಜೆ ಅವರು ಮುಖ್ಯಮಂತ್ರಿಯಾಗಿದ್ದಾಗ ಇದಕ್ಕೆ ಬ್ರೇಕ್ ಹಾಕಿದ್ದರು. ಇದೀಗ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾದ ನಂತರ ಮತ್ತೆ ಈ ಬಿಡ್ಡಿಂಗ್ ಸಂಸ್ಕೃತಿ ಮುಂದುವರಿದಿದೆ.
ಇನ್ನೂ ರಾಜಸ್ಥಾನದಲ್ಲಿ ಇ-ಹರಾಜು ಕೂಡ ಆರಂಭಿಸಲಾಗಿದ್ದು, 7 ಸಾವಿರಕ್ಕೂ ಅಧಿಕ ಅಂಗಡಿಗಳನ್ನು ಹರಾಜು ಹಾಕಲು ಸರ್ಕಾರ ತೀರ್ಮಾನಿಸಿದೆ. ಇಷ್ಟೊಂದು ದೊಡ್ಡ ಪ್ರಮಾಣಕ್ಕೆ ಹರಾಜಾಗಿರುವುದನ್ನು ಕಂಡು ಅಂಗಡಿ ಮಾಲಕರು ಹಾಗೂ ಅಧಿಕಾರಿಗಳು ಆಶ್ಚರ್ಯಚಕಿತರಾಗಿದ್ದಾರೆ.