ಮಣಿಪುರ ಗಲಭೆಯಲ್ಲಿ 60 ಮಂದಿ ಸಾವು: 231 ಜನರಿಗೆ ಗಾಯ: ಪೊಲೀಸರ 1,041 ಗನ್ ಲೂಟಿ
ಇಂಫಾಲ: ಮಣಿಪುರ ಗಲಭೆ ಮತ್ತು ಹಿಂಸಾಚಾರದಲ್ಲಿ 60 ಮಂದಿ ಮೃತಪಟ್ಟಿದ್ದು, 231 ಜನರು ಗಾಯಗೊಂಡಿದ್ದಾರೆ. ದೇವಸ್ಥಾನಗಳು, ಚರ್ಚ್‌ಗಳು ಸೇರಿದಂತೆ 1,700 ಮನೆಗಳು ಬೆಂಕಿಗಾಹುತಿಯಾಗಿವೆ ಎಂದು ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ, ತೀವ್ರಗಾಯಗೊಂಡವರಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯಗೊಂಡವರ ಚಿಕಿತ್ಸೆಗೆ ತಲಾ 25 ಸಾವಿರ ರೂಪಾಯಿ ಪರಿಹಾರ ನೀಡಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದರು.
ಇದು ಆಕಸ್ಮಿಕವಾಗಿ ನಡೆದ ಘಟನೆ. ಶಾಂತಿ ನೆಲೆಸಲು ಜನರು ಸಹಕರಿಸಬೇಕು. ಮನೆ ಕಳೆದುಕೊಂಡ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಲಿದ್ದು, ಸೂರು ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಪೊಲೀಸ್ ಸಿಬ್ಬಂದಿ ಬಳಿಯಿದ್ದ ಗನ್ ಲೂಟಿ:
ಪೊಲೀಸ್ ಸಿಬ್ಬಂದಿ ಬಳಿಯಿದ್ದ 1,041 ಗನ್ ಗಳನ್ನು ದುಷ್ಕರ್ಮಿಗಳು ಲೂಟಿ ಮಾಡಿದ್ದಾರೆ. ಈ ಪೈಕಿ 214 ಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳನ್ನು ಕೂಡಲೇ ವಾಪಸ್ ನೀಡಬೇಕು. ಇಲ್ಲವಾದರೆ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯಲಾಗುವುದು ಎಂದು ಅವರು ಎಚ್ಚರಿಸಿದರು.
ಸಾವಿನ ಸಂಖ್ಯೆ ಬಗ್ಗೆ ಬಿಜೆಪಿ ಸ್ಪಷ್ಟ ಚಿತ್ರಣ ನೀಡುತ್ತಿಲ್ಲ: ಮಮತಾ ಆರೋಪ
ಕಂಡರೆ ಗುಂಡಿಕ್ಕಿ ಆದೇಶ ಜಾರಿಯಲ್ಲಿರುವ ಮಣಿಪುರದಲ್ಲಿ ಸಾವಿನ ಸಂಖ್ಯೆ ಬಗ್ಗೆ ಸ್ಪಷ್ಟ ಚಿತ್ರಣವನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನೀಡುತ್ತಿಲ್ಲ’ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯಾಗಲಿ, ಅಮಿತ್ ಶಾ ಆಗಲಿ ಮಣಿಪುರದಲ್ಲಿ ಏನಾಗುತ್ತಿದೆ ಎಂಬುವುದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಒಬ್ಬ ಪ್ರತಿನಿಧಿಯನ್ನು ಕಳುಹಿಸಿ ಪರಿಸ್ಥಿತಿ ಅವಲೋಕಿಸುವ ಗೋಜಿಗೂ ಹೋಗಲಿಲ್ಲ ಎಂದು ಆರೋಪಿಸಿದ್ದಾರೆ.
ಮಣಿಪುರದ ಪರಿಸ್ಥಿತಿ ಕಂಡು ಉದ್ವಿಗ್ನಗೊಂಡಿದ್ದೇನೆ. ಕಂಡಲ್ಲಿ ಗುಂಡಿಕ್ಕಿ ಆದೇಶ ಜಾರಿಯಲ್ಲಿದ್ದು, ರಾಜ್ಯ ಸರ್ಕಾರವು ಯಾವುದೇ ಮಾಹಿತಿ ನೀಡದ ಕಾರಣ ಸಾವಿನ ಸಂಖ್ಯೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ. ನಿಜಕ್ಕೂ ಆಘಾತಕ್ಕೊಳಗಾಗಿದ್ದೇನೆ ಎಂದರು.
ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕ ಚುನಾವಣೆ ಪ್ರಚಾರದಲ್ಲಿಯೇ ಮಗ್ನರಾಗಿದ್ದಾರೆ. ಗೃಹ ಸಚಿವರ ಬಳಿ ಹೆಲಿಕಾಪ್ಟರ್ ಗಳು ಮತ್ತು ರಕ್ಷಣಾ ಪಡೆಗಳ ವಿಮಾನಗಳಿದ್ದರೂ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಒಂದು ದಿನದ ಭೇಟಿ ನೀಡಲು ಸಾಧ್ಯವಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಮಣಿಪುರ ಹೊತ್ತಿ ಉರಿಯುತ್ತಿದೆ. ಆದರೆ, ಯಾರು ಈ ಬಗ್ಗೆ ಮಾತನಾಡುತ್ತಿಲ್ಲ. ಚುನಾವಣೆ ಬರುತ್ತದೆ ಹೋಗುತ್ತದೆ, ಆದರೆ ಜನರ ಜೀವ ಅಮೂಲ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw