ಪರಿವರ್ತನೆ ಬಯಸುವ ಚಲನಶೀಲ ಮನುಷ್ಯರಿಗೆಲ್ಲರಿಗೂ 65ನೇ ಧಮ್ಮ ದೀಕ್ಷಾ ದಿನದ ಶುಭಾಶಯಗಳು
- ಲೇಖಕರು: ಭಾಸ್ಕರ್ ವಿಟ್ಲ
ಬೋಧಿಸತ್ವ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರು ಲಕ್ಷಾಂತರ ಅನುಯಾಯಿಗಳೊಂದಿಗೆ, ಮಹಾರಾಷ್ಟ್ರದ ನಾಗ್ಪರದಲ್ಲಿ (ದೀಕ್ಷಾ ಭೂಮಿ) ಬೌದ್ಧ ಧರ್ಮವನ್ನು ಸ್ವೀಕರಿಸಿದ ಐತಿಹಾಸಿಕ ದಿನ. ಈ ದಿನವನ್ನು ( 14-10-1956) ಧಮ್ಮ ದೀಕ್ಷಾ ದಿನ ಎಂದು ಸಂಭ್ರಮಿಸಲಾಗುತ್ತದೆ.
ಜಾತಿ ಅಸಮಾನತೆ, ಜಾತಿ ದೌರ್ಜನ್ಯ, ಜಾತಿ ವ್ಯವಸ್ಥೆಯನ್ನೆ ಪ್ರಬಲವಾಗಿ ವಿರೋಧಿಸಿ, ಜಾತಿ ವಿನಾಶದ ಮಹತ್ತರ ಕಾರ್ಯ ಕೈಗೆತ್ತಿಗೊಂಡು; ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯಲಾರೆ ಎಂದು, ಭಾರತ ದೇಶದಲ್ಲೇ ಹುಟ್ಟಿ ಈ ಮಣ್ಣಿನಲ್ಲೇ ಇತಿಹಾಸ ಸೃಷ್ಟಿಸಿದ, ಸಮಾನತೆ, ಸ್ವಾತಂತ್ರ್ಯ ಹಾಗೂ ಭ್ರಾತೃತ್ವದ ಅಡಿಪಾಯ ಹೊಂದಿದ ‘ಅಪ್ಪಟ ದೇಸಿ’ ಬೌದ್ಧ ಧರ್ಮವನ್ನು ಸ್ವೀಕರಿಸಿದರು.
ತ್ರಿಪಿಟಕಗಳಂತಹ ವಿಸ್ತಾರವಾದ ಅಧ್ಯಯನ ಹಿನ್ನಲೆ ಹೊಂದಿರುವ ಬೌದ್ಧ ಧರ್ಮಕ್ಕೆ ಪರ್ಟಿಕ್ಯುಲರ್ ಧರ್ಮಗ್ರಂಥವೊಂದರ ಅವಶ್ಯಕತೆ ಮನಗಂಡು, #Buddha_and_His_Dhamma ಎನ್ನುವ ಕೃತಿ ರಚಿಸಿದ ಬಾಬಾ ಸಾಹೇಬರು ಸಕಲರಿಗಾಗಿ, ಬೌದ್ಧ ಧರ್ಮದ ವಿಸ್ತಾರವನ್ನು ಹಾಗೂ ಉದ್ದೇಶವನ್ನು ಅರಿಯಲು ಸಹಕಾರಿಯಾಗಿದ್ದಾರೆ. ಈ ಕೃತಿಯನ್ನು ‘ಬೌದ್ಧರ ಬೈಬಲ್’ ಎಂದೇ ಗುರುತಿಸಲಾಗುತ್ತದೆ.
Buddha and his Dhamma, Buddha or Karl marx, Revolution and Counter revolution in Ancient India ಈ ಮೂರು ಕೃತಿಗಳನ್ನು ಒಟ್ಟಿಗೆ ಓದಿದಾಗ ಬೌದ್ಧ ಧರ್ಮದ ಇತಿಹಾಸ, ಅದರ ವಿಸ್ತಾರ, ಅಗತ್ಯ, ಅದು ಹೇಗೆ ಈ ದೇಶದಲ್ಲಿ ನಾಶವಾಯಿತು ಮತ್ತು ಆತ್ಮ, ದೇವರು, ಪುನರ್ಜನ್ಮಗಳನ್ನೇ ಧರ್ಮದ ಮೂಲ ಅಸ್ತಿತ್ವ ಮಾಡಿಕೊಂಡ ಧರ್ಮಗಳ ಜೊತೆಗೆ ಬೌದ್ಧ ಧರ್ಮವನ್ನೂ ಸೇರಿಸಿ, ಧರ್ಮವೆಂದರೆ ಪೂರ್ವಾಗ್ರಹಿಯಾಗಿ ಕಾಣುವ ಎಡಚಿಂತನೆಗೆ ಉತ್ತರವಾಗಿ ತಥಾಗತ ಗೌತಮ ಬುದ್ಧರನ್ನು ಆಧುನಿಕ ಜಗತ್ತಿನ ಅಪ್ರತಿಮ ಚಿಂತಕ ಕಾರ್ಲ್ ಮಾರ್ಕ್ಸ್‌ರವರ ಜೊತೆಗೆ ನಿಲ್ಲಿಸಿ, ಮಾರ್ಕ್ಸ್ ಪ್ರಶ್ನೆಗಳಿಗೆ ತಥಾಗತರು ಉತ್ತರ ನೀಡಬಲ್ಲರೇ ಎನ್ನುವ ರೀತಿಯಲ್ಲಿ ಬರೆದಿದ್ದಾರೆ.
ಜಾತಿ ಅಸಮಾನತೆಯಲ್ಲಿ ಬೆಂದು ನೊಂದಿರುವ ಈ ನೆಲದ ಬಹುಸಂಖ್ಯಾತ ಜನರಿಗೆ ಪರ್ಯಾಯವಾಗಿ ಸಾಮಾಜಿಕ ಐಡೆಂಟಿಟಿಯನ್ನು ಧಾರ್ಮಿಕ ನೆಲೆಗಟ್ಟಿನ ಮೂಲಕ ನೀಡಿ, ಜಾತಿ ವಿನಾಶಕ್ಕೆ ಪೂರಕವಾಗಿ, ಶಾಶ್ವತ ಪರಿಹಾರವನ್ನು ಬೌದ್ಧರಾಗುವ ಮೂಲಕ ಸೂಚಿಸಿದರು. ಈ ಪರಿಹಾರ ಜಾತಿ ಅಸಮಾನತೆ ಅನುಭವಿಸದ ಸಮಾಜದ ಮೇಲ್ಪಂಕ್ತಿಯಲ್ಲಿರುವ ಅಥವಾ ಈಗಾಗಲೇ ಧಾರ್ಮಿಕವಾಗಿ ಈ ಸಮಾಜದಲ್ಲಿ ಗುರುತಿಸಿಕೊಂಡಿರುವ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಅರ್ಥವಾಗುವುದು ಸ್ವಲ್ಪ ಕಷ್ಟ. ಕಾರಣ, ಅವರು ಈಗ ಎರಡನೇ ಹಂತವಾದ ರಾಜಕೀಯದಲ್ಲಿ ಕಾರ್ಯನಿರತರಾಗಿದ್ದಾರೆ. ರಾಜಕೀಯಕ್ಕೆ ಯಥಾಸ್ಥಿತಿವಾದ ಅತ್ಯಂತ ಹಿತವಾದದ್ದು, ಅದು ಸಾಮಾಜಿಕವಾಗಿ ಯಾವುದೇ ಬದಲಾವಣೆಯನ್ನು ಬಯಸುವುದಿಲ್ಲ. ಹಾಗಾಗಿ ಈಗಾಗಲೇ ಹಿಂದೂಗಳಾಗಿ ಮೇಲ್ಪಂಕ್ತಿಯಲ್ಲಿ ಇರುವವರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಈ ನೆಲದ ಶೋಷಿತರ ಬೌದ್ಧ ಧರ್ಮದ ಒಲವಿಗೆ ಅಷ್ಟಾಗಿ ಸ್ಪಂದಿಸುವುದಿಲ್ಲ. ಇದು ಅವರ ತಪ್ಪು ಎನ್ನಲಾಗದು ಬದಲಿಗೆ ಅವರಿಗೆ ಧಾರ್ಮಿಕ ಬಡತನದ ಅರಿವು ಹಾಗೂ ಅನುಭವ ಇಲ್ಲದಿರುವುದರ ಕಾರಣವಾಗಿದೆ.
ಧಾರ್ಮಿಕ ನೆಲೆಗಟ್ಟು ಹಾಗೂ ಸಾಮಾಜಿಕ ಐಡೆಂಟಿಟಿ ಯಾಕೆ ಬೇಕು? ಎನ್ನುವ ಪ್ರಶ್ನೆ ಸರ್ವೇ ಸಾಮಾನ್ಯವಾದುದು. ಭ್ರಾತೃತ್ವದ ನೆಲೆಗಟ್ಟಿನಲ್ಲಿ ತತ್ವಜ್ಞಾನದ ಅರ್ಥಾತ್ ಧಾರ್ಮಿಕ ಚಿಂತನೆಯ ಕೊಡುಗೆ ಹೆಚ್ಚಿದೆ. ಧಾರ್ಮಿಕವಾಗಿ ತೀರಾ ಪೂರ್ವಾಗ್ರಹ ಹೊಂದಿದ ಮೂಲಭೂತವಾದ ಅದೇ ಭ್ರಾತೃತ್ವವನ್ನು ಧಾರ್ಮಿಕ ಕಾರಣ ನೀಡಿ ನಾಶ ಪಡಿಸಿದ್ದೂ ನಮ್ಮ ಕಣ್ಣ ಮುಂದಿದೆ. ಇದರ ಕಾರಣವೊಡ್ಡಿ ಧರ್ಮದ ಅಗತ್ಯವನ್ನು ನಿರಾಕರಿಸಲು ಸಾಧ್ಯವಿಲ್ಲ. ಹಿರೋಶಿಮಾ ನಾಗಾಸಾಕಿ ಮೇಲೆ ಅಣುಬಾಂಬ್ ಪ್ರಯೋಗ ಮಾಡಿ ಜೀವರಾಶಿಗಳನ್ನು ಅಕ್ಷರಶಃ ಸುಟ್ಟವರಿಗೆ ಯಾವುದೇ ಧಾರ್ಮಿಕ ಕಲಹಗಳು ಇರಲಿಲ್ಲ. ಒಂದು ಘಟನೆಯನ್ನು ಉದಾಹರಿಸಿ ಇದು ಹೀಗೆಯೇ ಎಂದು ಷರಾ ಬರೆಯುವುದು ಸರಿಯಲ್ಲ. ಧಾರ್ಮಿಕ ಮೂಲಭೂತವಾದ ಖಂಡನೀಯ ಇದರಲ್ಲಿ ಎರಡು ಮಾತಿಲ್ಲ. ಧರ್ಮಗಳ ಸದುದ್ದೇಶ ಹಾಗೂ ಅಗತ್ಯವನ್ನು ವಿವರಿಸುವಲ್ಲಿ ಧಾರ್ಮಿಕತೆಯ ಒಲವುಳ್ಳ ಜನರು ಸೋತಿದ್ದಾರೆ. ದೇವರು, ಸ್ವರ್ಗ, ನರಕ, ಪುನರ್ಜನ್ಮ, ಪಾಪ, ಪುಣ್ಯಗಳ ಬಗ್ಗೆಯೇ ಹೇಳಿಕೊಂಡು ದೇವರ ಜಾಹೀರಾತು ನೀಡುವುದು ಬಿಟ್ಟರೆ, ಜನರ ಜೀವನಕ್ಕೆ ಅಗತ್ಯವಾದ ಅಂಶಗಳನ್ನು ಹೇಳುವುದನ್ನೇ ಮರೆತುಬಿಟ್ಟಿದ್ದಾರೆ. ಇದೇ ಕಾರಣ ವೈಜ್ಞಾನಿಕ ಜಗತ್ತಿಗೆ ಧರ್ಮವೆಂದರೆ ನಿರ್ಲಕ್ಷ.
ಬೌದ್ಧ ಧರ್ಮದಲ್ಲಿ ಬೌದ್ಧರಿಗೆ ಯಾವ ರೀತಿಯ ಜೀವನ ಹಾಗೂ ಸಾಮಾಜಿಕ ಸ್ಥಾನಮಾನ ಇತ್ತು ಮತ್ತು ಇದೆ; ಇಸ್ಲಾಂ ಧರ್ಮದಲ್ಲಿ ಮುಸಲ್ಮಾನರಿಗೆ ಯಾವ ರೀತಿಯ ಜೀವನ ಹಾಗೂ ಸಾಮಾಜಿಕ ಸ್ಥಾನಮಾನವಿದೆ; ಅದೇ ರೀತಿ ಕ್ರಿಶ್ಚಿಯನ್ ಧರ್ಮೀಯರಿಗಿರುವ ಸಾಮಾಜಿಕ ಸ್ಥಾನಮಾನ ಹಾಗೂ ಭದ್ರತೆ, ಹೀಗೆ ಜೈನರಿಗೆ, ಸಿಕ್ಖರಿಗೆ ಸಿಕ್ಕ ಸಾಮಾಜಿಕ ಸ್ಥಾನಮಾನವನ್ನೆಲ್ಲಾ ಕಂಪೇರ್ ಮಾಡಿ ನೋಡಿದರೆ ಈ ಎಲ್ಲಾ ಧರ್ಮಗಳು ತಮ್ಮ ಧರ್ಮದ ತೆಕ್ಕೆಯೊಳಗೆ ಸಾಮಾಜಿಕವಾಗಿ ಸಮಾನ ಸ್ಥಾನಮಾನ ಹಾಗೂ ಗೌರವವನ್ನು ನೀಡಿರುವುದು ಸತ್ಯ. ಜನಾಂಗೀಯವಾಗಿ ಕಪ್ಪು ಬಿಳಿ, ಲಿಂಗಾಧಾರಿತವಾಗಿ ಹೆಣ್ಣಯ ಗಂಡು ಎಂಬ ಅಸಮಾನತೆ ಜೀವಂತ ಇರುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಇಂತಹ ಅಸಮಾನತೆಯನ್ನು ಆ ಧರ್ಮಗಳು ಅಥವಾ ಧರ್ಮಗ್ರಂಥಗಳು ಎಲ್ಲಿಯೂ ಪ್ರತಿಪಾದಿಸಿಲ್ಲ ಎನ್ನುವ ಸತ್ಯವನ್ನೂ ತಿಳಿದುಕೊಳ್ಳಬೇಕು. ಆದರೆ ಹಿಂದೂ ಧರ್ಮದಲ್ಲಿ ಶೂದ್ರರ ಹಾಗೂ ದಲಿತರ ಸ್ಥಾನಮಾನವೇನು? ಎಂಬ ಪ್ರಶ್ನೆಗೆ ಉತ್ತರ ಏನು? ಇದು ಟೀಕೆಯಲ್ಲ ಬದಲಿಗೆ ಪ್ರಶ್ನೆ. ಋಗ್ವೇದದ ಪುರುಷಸೂಕ್ತದಿಂದ ಹಿಡಿದು ಗೀತೆಯವರೆಗೂ ವರ್ಣಗಳನ್ನು ಧರ್ಮದ ಮೂಲಗುಣವನ್ನಾಗಿ ಉಲ್ಲೇಖಿಸಿ ಧರ್ಮದೊಳಗೇ ವರ್ಣಗಳು ಪರಸ್ಪರ ಸಮನಾಗಿಲ್ಲ ಹಾಗೂ ಇದು ದೈವೀಕವಾದದ್ದು ಎಂಬ ದೈವವಾಣಿಯನ್ನು ಹಂತ ಹಂತವಾಗಿ ಪುನರುಚ್ಛರಿಸುತ್ತಾ ಬಂದಿರುವುದು ಅಧ್ಯಯನ ನಡೆಸಿದವರಿಗೆ ಕಂಡುಬರುವ ಸಾಮಾನ್ಯ ಸಂಗತಿ.
ಹಾಗಾಗಿ ಧರ್ಮ ಪ್ರತಿಪಾದಿಸುವ ವಿಚಾರಗಳು ಹಾಗೂ ಸಮಾಜವನ್ನು ರೂಪಿಸುವಲ್ಲಿ ಅದು ಅಳವಡಿಸುವ ಸಂಗತಿಗಳು ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ದೈವೀಕವಾಗಿ ಅಸಮಾನತೆ ರೂಪಿತವಾಗಿದೆ ಎನ್ನುವುದನ್ನು ಜನರ ತಲೆಯೊಳಗೆ ಧಾರ್ಮಿಕ ಗ್ರಂಥಗಳ ಮೂಲಕ ತುಂಬಿದಾಗ ಅದು ದೈವವಾಣಿಯಾಗಿ ಸಮಾಜದಲ್ಲಿ ಅಸಮಾನತೆಯೆನ್ನುವುದು ಜೀವಂತವಾಗಿಯೇ ಇರುತ್ತದೆ. ಈ ಅಸಮಾನತೆ ಹಾಗೂ ಅದರಿಂದಾಗುವ ಶೋಷಣೆಯನ್ನು ಬೀದಿಯಲ್ಲಿ ಬಾವುಟ ಹಾರಿಸುವ ಮೂಲಕ ತಡೆಯಲು ಎಷ್ಟೇ ಪ್ರಯತ್ನ ಪಟ್ಟರೂ ಅದು ರಾಜಕೀಯವಾಗಿ ಆಹಾರವಾಗಬಲ್ಲದೇ ಹೊರತು ಸಮಸ್ಯೆಗೆ ಪರಿಹಾರವಾಗಲು ಸಾಧ್ಯವಿಲ್ಲ.
ಕೊನೆಯದಾಗಿ ಒಂದು ಮಾತು,
ಇಲ್ಲಿ ಬೌದ್ಧ ಧರ್ಮದ ಚಳುವಳಿಯ ಬಗ್ಗೆ ಮಾತನಾಡಿದಾಗ ಬಹಳಷ್ಟು ಪ್ರಗತಿಪರರು, ಎಡಚಿಂತಕರು ಹಾಗೂ ಕೆಲ ಧಾರ್ಮಿಕ ಅಲ್ಪಸಂಖ್ಯಾತರು ಬರ್ಮಾದ ಉದಾಹರಣೆಯಾಗಿ(ರೊಹಿಂಗ್ಯಾದವರ ಮೇಲೆ ನಡೆದ ಜನಾಂಗೀಯ ಸಂಘರ್ಷ) ನೀಡಿ ದಿಕ್ಕು ತಪ್ಪಿಸುತ್ತಾರೆ. ಬರ್ಮಾದಲ್ಲಿ ನಡೆದ ಸಂಘರ್ಷ ಹಾಗೂ ಹಿಂಸೆಗೆ ಕರ್ನಾಟಕದ ಬೌದ್ಧರು ಕಾರಣರಲ್ಲ ಅಥವಾ ಬೌದ್ಧ ಧರ್ಮವಾಗಲಿ ಕಾರಣವಲ್ಲ. ಹಾಗೊಂದು ವೇಳೆ ಆ ಹಿಂಸೆಗೆ ಧಾರ್ಮಿಕ ಹಿನ್ನಲೆ ಕೊಟ್ಟು ನೋಡುವುದೇ ಆದರೆ, ಜಗತ್ತಿನ ಧಾರ್ಮಿಕ ಮೂಲಭೂತವಾದವನ್ನು ಉಲ್ಲೇಖಿಸಿ ವೈದಿಕ, ಇಸ್ಲಾಂ ಹಾಗೂ ಕ್ರೈಸ್ತ ಧರ್ಮವನ್ನೂ ತಿರಸ್ಕರಿಸಬಾರದೇಕೆ? ಮೂರ್ತಿ ಪೂಜೆಯನ್ನು ವಿರೋಧಿಸುವ ಧಾರ್ಮಿಕ ಚಿಂತನೆಯಡಿ ಭಾರತದಲ್ಲಿ ಬುದ್ಧರ ಮೂರ್ತಿಗಳನ್ನು ನಾಶ ಮಾಡಿದ ದರೋಡೆಕೋರರು ಯಾವ ಧರ್ಮೀಯರಾಗಿದ್ದರು? ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ. ಅವರನ್ನು ಭಾರತಕ್ಕೆ ಆಹ್ವಾನ ನೀಡಿ ಕರೆದವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕಿದರೆ ಸ್ವಾರಸ್ಯಕರ ಉತ್ತರಗಳು ದೊರೆಯುತ್ತವೆ.
ಈ ದಿನ, ಈ ನೆಲದ ಶೋಷಿತರಿಗೆ ಅವರನುಭವಿಸಿದ್ದ ಹಾಗೂ ಅನುಭವಿಸುತ್ತಿರುವ ಜಾತಿ ಅಸಮಾನತೆ, ಧಾರ್ಮಿಕ ಬಡತನ ಹಾಗೂ ಸಾಮಾಜಿಕ ಸ್ಥಾನಮಾನದ ಕೊರತೆಯನ್ನು ನೀಗಿಸಲು ಶಾಶ್ವತ ಪರಿಹಾರ ನೀಡಿದ ದಿನ. ಅಂಧಾಕಾರದಲ್ಲಿದ್ದುಕೊಂಡು ಅಸಮಾನತೆಯೆನ್ನುವುದು ದೈವ ನಿಯಮಗಳೆಂದು ನಂಬಿದ್ದ ಜನರಿಗೆ ವೈಚಾರಿಕತೆಯನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಚಿಂತಿಸುವಂತೆ ಮಾಡಿದ ದಿನ. ಭಾರತದ ಇತಿಹಾಸದಲ್ಲೇ, ಸಾಮಾಜಿಕ ಚಳುವಳಿಯನ್ನು ಒಂದು ಹಂತಕ್ಕೆ ಕೊಂಡೊಯ್ದು ಅದಕ್ಕೊಂದು ತಾತ್ವಿಕ ಕೊನೆಯನ್ನು ನೀಡಿ; ಅದೇ ಕೊನೆ ಮುಂದಿನ ಪೀಳಿಗೆಯ ಸಾಮಾಜಿಕ ಜೀವನಕ್ಕೆ ‘ಆರಂಭ’ವಾಗುವಂತೆ ಮಾಡಿದ ಐತಿಹಾಸಿಕ ದಿನ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR