6ರಿಂದ 8ನೇ ತರಗತಿಯವರೆಗೆ ಪೂರ್ಣ ಪ್ರಮಾಣದ ತರಗತಿ ಆರಂಭ | ಈ ಪ್ರದೇಶಗಳಲ್ಲಿ 8ನೇ ತರಗತಿ ಮಾತ್ರ ಆರಂಭ
ಬೆಂಗಳೂರು: ರಾಜ್ಯದಲ್ಲಿ ಫೆಬ್ರವರಿ 22ರಿಂದ 6ನೇ ತರಗತಿಯಿಂದ 8ನೇ ತರಗತಿಯ ವರೆಗೆ ಶಾಲೆ ಆರಂಭಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 9 ರಿಂದ 12ನೇ ತರಗತಿ ಆರಂಭದ ಬಳಿಕ, ಈಗ 6 ರಿಂದ 8ನೇ ತರಗತಿ ಆರಂಭಿಸಲಾಗುತ್ತಿದೆ. 1 ರಿಂದ 5ನೇ ತರಗತಿಯವರೆಗೆ ವಿದ್ಯಾಗಮದ ಮೂಲಕ ಶೈಕ್ಷಣಿಕ ಕಲಿಕೆ ಮುಂದುವರೆಯಲಿದೆ ಎಂದು ತಿಳಿಸಿದರು.
ಇನ್ನೂ ಸಿ ಬಿ ಎಸ್ ಸಿ ಇ ಶೈಕ್ಷಣಿಕ ತರಗತಿಗಳು ಏಪ್ರಿಲ್ 1ರಿಂದ ಆರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಿಲ್ಲ. ಕೊರೋನಾ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳು, ಶಿಕ್ಷಕರಿಗೆ ಕೊರೋನಾ ಪರೀಕ್ಷೆ ಕಡ್ಡಾಯವಾಗಿದೆ ಎಂದು ತಿಳಿಸಿದರು.
ಬೆಂಗಳೂರು ನಗರ ಹಾಗೂ ಕೇರಳ ಗಡಿ ಭಾಗದ ಪ್ರದೇಶಗಳಲ್ಲಿ 6 ಮತ್ತು 7ನೇ ತರಗತಿ ಆರಂಭವಿಲ್ಲ. 8ನೇ ತರಗತಿ ಮಾತ್ರ ಆರಂಭ ಆಗಲಿದೆ ಎಂದು ವಿವರಿಸಿದರು. ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಕರೋನಾ ಟೆಸ್ಟ್ ರಿಪೋರ್ಟ್ ಕಡ್ಡಾಯ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.