ಊಟ ಕೇಳಿದ 82 ವರ್ಷ ವಯಸ್ಸಿನ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ಪುತ್ರ
ಉಡುಪಿ: ಊಟ ಕೇಳಿದ 82 ವರ್ಷ ವಯಸ್ಸಿನ ತಾಯಿಗೆ ಪುತ್ರ ಹಿಗ್ಗಾಮುಗ್ಗಾ ಥಳಿಸಿ ಮನೆಯಿಂದ ಹೊರಗೆ ಹಾಕಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದ್ದು, ಎದ್ದು ನಿಲ್ಲಲು ಕೂಡ ಆಗದ ತಾಯಿಯ ಜೊತೆಗೆ ಮಗ ಕ್ರೂರವರ್ತನೆ ತೋರಿದ್ದಾನೆ ಎಂದು ವರದಿಯಾಗಿದೆ.
ತಾಲೂಕಿನ ಕಲ್ಯಾ ಗ್ರಾಮದ ಕೈಕಂಬ ಎಂಬಲ್ಲಿನ 82 ವರ್ಷ ವಯಸ್ಸಿನ ಯಶೋಧ ಅವರು ಪುತ್ರನಿಂದಲೇ ಕ್ರೂರವಾಗಿ ಹಲ್ಲೆಗೊಳಗಾದವರಾಗಿದ್ದಾರೆ. ಪುತ್ರ ದಾಮೋದರ, ಎದೆ ಹಾಲು ನೀಡಿ, ಕೈತುತ್ತು ನೀಡಿ ಬೆಳೆಸಿದ ತಾಯಿಯನ್ನು ವೃದ್ಧಾಪ್ಯದಲ್ಲಿ ಹೀನಾಯವಾಗಿ ಥಳಿಸುವ ಮೂಲಕ ಈ ದುಷ್ಕೃತ್ಯವನ್ನು ಮೆರೆದಿದ್ದಾನೆ ಎಂದು ವರದಿಯಾಗಿದೆ.
ಪುತ್ರನಿಂದ ಹಲ್ಲೆಗೊಳಗಾಗಿ ಮನೆಯ ಜಗಲಿಯಲ್ಲಿ ನರಳಾಡುತ್ತಿದ್ದ ವೃದ್ಧೆಯನ್ನು ಸಮಾಜ ಸೇವಕಿ ರಮಿತ ಶೈಲೇಂದ್ರ ಅವರು ಪುತ್ರನಿಗೆ ಬುದ್ಧಿವಾದ ಹೇಳಿ ಆತನಿಂದಲೇ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
5 ವರ್ಷಗಳ ಹಿಂದೆ ಯಶೋಧ ಅವರ ಪತಿ ನಿಧನರಾಗಿದ್ದರು. ಇದಾದ ಬಳಿಕ ವೃದ್ಧೆ ಮಗ ಮತ್ತು ಸೊಸೆಯ ಜೊತೆಗೆ ವಾಸವಿದ್ದರು. ಆದರೆ ಮಗ ಮತ್ತು ಸೊಸೆ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಮರದ ತುಂಡಿನಿಂದ ಹೊಡೆದು ಗಾಯ ಮಾಡಿದ್ದಾರೆ ಎಂದು ವೃದ್ಧೆ ನೋವಿನಿಂದ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಗ ದಾಮೋದರನ ವಿರುದ್ಧ ತಾಯಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.