“ಈಗ ಬರುತ್ತೇನೆ” ಎಂದು 90ರ ವಯಸ್ಸಿನ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಪರಾರಿಯಾದ ಮಗ!
ಕೊಪ್ಪಳ: ವಯೋ ವೃದ್ಧೆ ತಾಯಿಯ ಕೈಗೆ ಸಿಮ್ ಇಲ್ಲದ ಮೊಬೈಲ್ ಕೊಟ್ಟು, ಈಗ ಬರುತ್ತೇನೆ ಇಲ್ಲೇ ನಿಲ್ಲು ಎಂದು ಹೇಳಿ ಹೋದ ಮಗ ತಿರುಗಿ ಬರಲಿಲ್ಲ. ಇತ್ತ ಮಗ ಈಗ ಬರುತ್ತಾನೆ ಅಂತ ಕಾದು ಕುಳಿತ ತಾಯಿ ಮಗ ಗಂಟೆಗಳು ಕಳೆದರೂ ಮರಳದೇ ಇರುವುದನ್ನು ಕಂಡು ಕಂಗಾಲಾಗಿದ್ದಾಳೆ.
ಇಂತಹದ್ದೊಂದು ಅಮಾನವೀಯ ಘಟನೆ ನಡೆದಿರುವುದು ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನದ ಬಳಿ. ಬಳ್ಳಾರಿ ಜಿಲ್ಲೆಯ ಕೊಟ್ಟುರು ತಾಲೂಕಿನ ನಿವಾಸಿಯಾಗಿರುವ ಖಾಸೀಂಬಿ ಎಂಬ ಹೆಸರಿನ ವೃದ್ಧೆ ಮಗನಿಂದಲೇ ಮೋಸ ಹೋದ ತಾಯಿಯಾಗಿದ್ದಾರೆ.
ಖಾಸೀಂಬಿ ಅವರಿಗೆ 90 ವರ್ಷ ವಯಸ್ಸಾಗಿದೆ. ಜೀವನದ ಕೊನೆಯ ದಿನಗಳಲ್ಲಿ ತನ್ನ ಪಾಪಿ ಮಗನ ಇನ್ನೊಂದು ಮುಖ ಕಂಡು ತೀವ್ರವಾಗಿ ಮರುಗಿದ್ದಾರೆ. ಸಿಮ್ ಇಲ್ಲದ ಮೊಬೈಲ್ ನ್ನು ತಾಯಿಯ ಕೈಗೆಕೊಟ್ಟ ಮಗ ಈಗ ಬರುತ್ತೇನೆ ಎಂದು ಹೋದವ 15 ದಿನಗಳಾದರೂ ವಾಪಸ್ ಆಗಲಿಲ್ಲ. ಇತ್ತ ರಸ್ತೆ ಬದಿಯಲ್ಲಿ ಕಾಲ ಕಳೆದಿದ್ದಾರೆ. ಒಂದೆಡೆ ಮಳೆ ಸುರಿಯುತ್ತಿದ್ದರೂ, ಆ ಮಳೆಯಲ್ಲಿ ನೆಂದು ಕಾಲ ಕಳೆದಿದ್ದಾರೆ. ಎರಡು ದಿನಗಳ ಕಾಲ ಸರಿಯಾಗಿ ಊಟ ಸಿಗದೇ ಒದ್ದಾಡಿದ್ದಾರೆ. ಮಗನನ್ನು ಹೆತ್ತ ತಪ್ಪಿಗೆ 90ರ ವಯಸ್ಸಿನಲ್ಲಿ ವೃದ್ಧೆಗೆ ಎಂತಹ ಶಿಕ್ಷೆ ನೀಡಿದ್ದಾನೆ ನೋಡಿ.
ರಸ್ತೆ ಬದಿಯಲ್ಲಿ ಕಷ್ಟಪಡುತ್ತಿರುವ ವೃದ್ಧೆಯನ್ನು ನೋಡೊದ ಸ್ಥಳೀಯ ಹೃದಯವಂತರು, ಆಕೆಯನ್ನು ಕರೆದು ವಿಚಾರಿಸಿದಾಗ, ದೇವಸ್ಥಾನಕ್ಕೆ ಮಗನೊಂದಿಗೆ ಬಂದಿದ್ದೇನೆ. ಮೊಬೈಲ್ ಕೊಟ್ಟು ಮಗ ಹೋಗಿದ್ದಾನೆ ಎಂದು ಅಜ್ಜಿ ಉತ್ತರಿಸಿದ್ದಾರೆ.
ಸ್ಥಳೀಯರು ತಕ್ಷಣವೇ ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಅಜ್ಜಿಯನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಬಹದ್ದೂರಬಂಡಿಯ ವೃದ್ಧಾಶ್ರಮದಲ್ಲಿ ವೃದ್ಧೆಯ ಆರೈಕೆ ಮಾಡಲಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka