9ನೇ ತರಗತಿಯ ವಿದ್ಯಾರ್ಥಿಗೆ 10ನೇ ತರಗತಿ ವಿದ್ಯಾರ್ಥಿಯಿಂದ ರಾಡ್ ನಿಂದ ಹಲ್ಲೆ

ರಾಮನಗರ: 10ನೇ ತರಗತಿಯ ವಿದ್ಯಾರ್ಥಿಯೊಬ್ಬ 9ನೇ ತರಗತಿಯ ವಿದ್ಯಾರ್ಥಿಗೆ ರಾಡ್ ನಿಂದ ಥಳಿಸಿದಲ್ಲದೇ, ಈ ವಿಚಾರ ಯಾರಿಗೂ ತಿಳಿಸದಂತೆ ಬೆದರಿಕೆಯೊಡ್ಡಿದ ಆಘಾತಕಾರಿ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ರಾಹುಲ್(14) ಹಲ್ಲೆಗೊಳಗಾದ ವಿದ್ಯಾರ್ಥಿಯಾಗಿದ್ದಾನೆ. 10ನೇ ತರಗತಿ ವಿದ್ಯಾರ್ಥಿ ಶಾಲಾ ಚುನಾವಣೆಯಲ್ಲಿ ಪ್ರಧಾನಿ(ಶಾಲಾ ನಾಯಕ)ಯಾಗಿ ಆಯ್ಕೆಯಾಗಿದ್ದ ಪುನೀತ್ ಗೌಡ ಎಂಬಾತ ವಿದ್ಯಾರ್ಥಿಗೆ ಹಲ್ಲೆ ನಡೆಸಿದವನಾಗಿದ್ದಾನೆ.
ಸೆಪ್ಟಂಬರ್ 12ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಟವಾಡುತ್ತಿದ್ದ ವೇಳೆ ಅಚಾನಕ್ ಆಗಿ ವಾಲಿಬಾಲ್ ರಾಹುಲ್ ನ ಕಾಲಿಗೆ ತಾಗಿತ್ತು, ಇದರಿಂದ ಕೋಪಗೊಂಡ ಪುನೀತ್ ಸೊಳ್ಳೆ ಪರದೆ ಹಾಕಲು ಅಳವಡಿಸುವ ರಾಡ್ ನಿಂದ ರಾಹುಲ್ ಗೆ ಹಲ್ಲೆ ನಡೆಸಿದ್ದಾನೆಂದು ಆರೋಪಿಸಲಾಗಿದೆ.
ಹಲ್ಲೆಯ ಬಳಿಕ, ನಾನೇ ಇಲ್ಲಿ ಪ್ರಧಾನ ಮಂತ್ರಿ, ಈ ವಿಚಾರ ಮನೆಯಲ್ಲಿ ಹೇಳದಂತೆ ಪುನೀತ್ ಗೌಡ ತಾಕೀತು ಮಾಡಿದ್ದಲ್ಲದೇ, ನೀನೇ ಬಿದ್ದು ಗಾಯ ಆಗಿದೆ ಅಂತ ಹೇಳು ಎಂದು ಒತ್ತಡ ಹೇರಿದ್ದಾನೆ. ಇತ್ತ ವಿದ್ಯಾರ್ಥಿ ಸಹಾಯ ಮಾಡಬೇಕಿದ್ದ ಪ್ರಾಂಶುಪಾಲ, ಕಾಟ್ ನಿಂದ ಬಿದ್ದು ಏಟಾಗಿದೆ ಅಂತ ಮನೆಯಲ್ಲಿ ಹೇಳು, ಇಲ್ಲದಿದ್ದರೆ ಚೆನ್ನಾಗಿರಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ನಂತರವೂ ಪುನೀತ್ ರಾಹುಲ್ ಮೇಲೆ ನಿರಂತರವಾಗಿ ದಬ್ಬಾಳಿಕೆ ಮಾಡಿದಾಗ ಮಾನಸಿಕವಾಗಿ ಕುಗ್ಗಿ ಹೋದ ರಾಹುಲ್ ತನ್ನ ಮನೆಯಲ್ಲಿ ವಿಚಾರ ತಿಳಿಸಿದ್ದಾನೆ. ಸದ್ಯ ಘಟನೆ ಸಂಬಂಧ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.