ನಿಂಬೆ ಹಣ್ಣಿನ ರಸ ಮೂಗಿಗೆ ಹಾಕಿಕೊಂಡ ಶಿಕ್ಷಕ ದಾರುಣ ಸಾವು!
ರಾಯಚೂರು: ನಿಂಬೆ ಹಣ್ಣಿನ ರಸ ಮೂಗಿಗೆ ಹಾಕಿಕೊಂಡ ಶಿಕ್ಷಕರೊಬ್ಬರು ಅಸ್ವಸ್ಥಗೊಂಡು ದಾರುಣವಾಗಿ ಸಾವನ್ನಪ್ಪಿದ್ದು, ಆರೋಗ್ಯವಾಗಿದ್ದ ವ್ಯಕ್ತಿ ಸುಳ್ಳು ಮಾಹಿತಿಗಳಿಂದ ಪ್ರೇರಿತರಾಗಿ ನಿಂಬೆ ರಸ ಮೂಗಿಗೆ ಸುರಿದುಕೊಂಡು ದಾರುಣವಾಗಿ ಸಾವನ್ನಪ್ಪಿದ್ದಾರೆ.
ನಿಂಬೆ ಹಣ್ಣಿನಲ್ಲಿ “ಸಿ” ಮತ್ತು “ಎ” ವಿಟಮಿನ್ ಇವೆ. ನಿಂಬೆ ಹಣ್ಣಿನ ರಸವನ್ನು ಮೂಗಿಗೆ ಹಾಕಿದರೆ, ದೇಹದಲ್ಲಿ ಆಮ್ಲಜನಕ ವೃದ್ಧಿಯಾಗುತ್ತದೆ ಎಂದು ಮಾಧ್ಯಮ ಮಾಲಿಕ ಹಾಗೂ ಉದ್ಯಮಿ ವಿಜಯಸಂಕೇಶ್ವರ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಹಲವರು ಇದನ್ನು ಪ್ರಯೋಗಿಸಲು ಮುಂದಾಗಿದ್ದಾರೆ.
ಸಿಂಧನೂರಿನ ಶರಣಬಸವೇಶ್ವರ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 43 ವರ್ಷ ವಯಸ್ಸಿನ ಶಿಕ್ಷಕ ಬಸವರಾಜ ಎಂಬವರು ನಿಂಬೆ ಹಣ್ಣಿನ ರಸವನ್ನು ಮೂಗಿಗೆ ಹಾಕಿದ್ದಾರೆ. ಅಲ್ಲಿಯವರೆಗೆ ಆರೋಗ್ಯವಂತವಾಗಿದ್ದ ಶಿಕ್ಷಕನ ಆರೋಗ್ಯದಲ್ಲಿ ಏರುಪೇರಾಗಿದೆ.
ಬೆಳಗ್ಗಿನಿಂದ ಆರೋಗ್ಯವಂತರಾಗಿದ್ದ ಶಿಕ್ಷಕ ನಿಂಬೆ ಹಣ್ಣಿನ ರಸ ಮೂಗಿಗೆ ಹಾಕಿಕೊಂಡ ಬಳಿಕ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ನಿಂಬೆ ಹಣ್ಣಿನ ರಸ ಮೂಗಿಗೆ ಹಾಕಿಕೊಳ್ಳುತ್ತಿದ್ದಂತೆಯೇ ಅವರು ತೀವ್ರವಾಗಿ ಒದ್ದಾಡಿದ್ದು, ಬಳಿಕ ಮೃತಪಟ್ಟಿದ್ದಾರೆ ಎಂದ ಕುಟುಂಬಸ್ಥರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಉದ್ಯಮಿ ವಿಜಯ ಸಂಕೇಶ್ವರ ಅವರು ಇಂತಹದ್ದೊಂದು ಮನೆ ಮದ್ದನ್ನು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ನಿಂಬೆ ಹಣ್ಣಿನ ರಸ ಮೂಗಿಗೆ ಹಾಕಿದರೆ, ಶ್ವಾಸಕೋಶ ಶುದ್ಧಿಯಾಗುತ್ತದೆ. ಆಕ್ಸಿಜನ್ ಸಿಲಿಂಡರ್ ನ ಅಗತ್ಯವಿರುವುದಿಲ್ಲ ಎಂದೂ ಹೇಳಿದ್ದರು. ಈ ಬಗ್ಗೆ ಆರೋಗ್ಯ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆರೋಗ್ಯ ಇಲಾಖೆ ಈ ಬಗ್ಗೆ ಜನರಿಗೆ ಸ್ಪಷ್ಟತೆಯನ್ನು ನೀಡಬೇಕು. ಯಾರದ್ದೋ ಪ್ರಚಾರದ ಹುಚ್ಚಿಗೆ ಜನರನ್ನು ಬಲಿಕೊಡುವುದು ಸರಿಯಲ್ಲ ಎನ್ನುವ ಮಾತುಗಳು ಸದ್ಯ ಕೇಳಿ ಬಂದಿದೆ.