ಕೊರೊನಾ ಇದೇ ಉತ್ಸವ ಮಾಡುದಿಲ್ಲ ಎಂದ ಅರ್ಚಕನಿಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗ ಥಳಿತ!
ಹಾಸನ: ಕೊರೊನಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಮಾದರಿಯ ಕರ್ಫ್ಯೂ ಜಾರಿಯಾಗಿದೆ. ಈ ನಡುವೆ ಉತ್ಸವ, ಜಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಿಂತು ಹೋಗಿವೆ. ಆದರೆ ಅರ್ಚಕರೇ, ಉತ್ಸವ ಜಾತ್ರೆ ಬೇಡ ಎಂದು ಹೇಳಿದರೂ ಜನ ಕೇಳುತ್ತಿಲ್ಲ. ಉತ್ಸವ ಬೇಡ ಎಂದು ಹೇಳಿದ ಇಲ್ಲೊಬ್ಬ ಅರ್ಚಕನಿಗೆ ಗ್ರಾಮದ ಭಕ್ತರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸಿಪುರದ ಕಬ್ಬತ್ತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ರಂಗನಾಥಸ್ವಾಮಿ ದೇವಸ್ಥಾನದ ಅರ್ಚಕ ಶ್ರೀಕಾಂತ್ ಹಲ್ಲೆಗೊಳಗಾದ ಅರ್ಚಕನಾಗಿದ್ದಾನೆ. ದೇವರ ಉತ್ಸವ ಮಾಡಿ, ಪೂಜೆ ನೆರವೇರಿಸುವಂತೆ ಗ್ರಾಮದ ಹಲವು ಯುವಕರು ಅರ್ಚಕರ ಮುಂದೆ ಬೇಡಿಕೆ ಇಟ್ಟಿದ್ದರಂತೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸಧ್ಯಕ್ಕೆ ಉತ್ಸವ ಸಾಧ್ಯವಿಲ್ಲ ಎಂದು ಅರ್ಚಕರು ಹೇಳಿದ್ದಾರೆ.
ಉತ್ಸವ ನಡೆಯಲೇ ಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಕೊರೊನಾದ ಕಾರಣದಿಂದಾಗಿ ಉತ್ಸವ ನಿಲ್ಲಬಾರದು ಎಂದು ಹೇಳಿದ್ದಾರೆ. ಆದರೆ ಅರ್ಚಕ ಒಪ್ಪದೇ ಇದ್ದಾಗ ಕೋಪಗೊಂಡ ಗ್ರಾಮಸ್ಥರು ಅರ್ಚಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನೂ ಅರ್ಚಕನಿಗೆ ತೀವ್ರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವರು ಇರುವಾಗ ಕೊರೊನಾ ಯಾವ ಲೆಕ್ಕ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದ್ದರೆ, ಕೊರೊನಾದ ನಡುವೆ ಉತ್ಸವ ನಡೆಸಿದರೆ, ಕಾನೂನು ಬಾಹಿರ ನಡೆ ಎನ್ನುವುದು ಅರ್ಚಕನ ಸಂಕಷ್ಟವಾಗಿತ್ತು. ಇದೀಗ ಉತ್ಸವದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಅರ್ಚಕಗೆ ಥಳಿಸಲಾಗಿದ್ದು, ಅರ್ಚಕನ ಕುಟುಂಬಸ್ಥರು ಗೊರೂರು ಪೊಲೀಸರ ಮೊರೆ ಹೋಗಿದ್ದು, ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.