ಕೊವಿಡ್ ಆಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್ | ಆಕ್ಸಿಜನ್ ಸ್ಥಗಿತಗೊಂಡು ಪ್ರಾಣ ಕಳೆದುಕೊಂಡ ಶಿಕ್ಷಕ
ಯಾದಗಿರಿ: ವಿದ್ಯುತ್ ವ್ಯತ್ಯಯ ಉಂಟಾದ ಪರಿಣಾಮ ಆಕ್ಸಿಜನ್ ಸರಬರಾಜಾಗದೇ ಶಿಕ್ಷಕರೊಬ್ಬರು ನರಳಾಡಿ ಪ್ರಾಣ ಬಿಟ್ಟ ಹೃದಯ ವಿದ್ರಾವಕ ಘಟನೆ ಯಾದಗಿರಿ ತಾಲೂಕಿನ ಮುದ್ನಾಳ್ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಶಿಕ್ಷಕ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಆಸ್ಪತ್ರೆ ವೈದ್ಯರು ಆಕ್ಸಿಜನ್ ಪೂರೈಸಿ ಆರೈಕೆ ಮಾಡುತ್ತಿದ್ದರು. ಆದರೆ, ಆಸ್ಪತ್ರೆಯ ನಿರ್ವಹಣೆ ವಿಭಾಗ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ಇಂತಹದ್ದೊಂದು ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಕೊವಿಡ್ ಆಸ್ಪತ್ರೆಯಲ್ಲಿ ಸತತ 3 ಗಂಟೆಗಳ ಕಾಲ ವಿದ್ಯುತ್ ಹೋಗಿದೆ. ಆಸ್ಪತ್ರೆಯ ವೈದ್ಯರು, ತಕ್ಷಣವೇ ವಿದ್ಯುತ್ ವ್ಯವಸ್ಥೆ ಮಾಡಿ ಎಂದು ನಿರಂತರವಾಗಿ ಮನವಿ ಮಾಡಿಕೊಂಡರಾದರೂ ಜನರೇಟರ್ ಗೆ ಹಾಕಲು ಡೀಸೆಲ್ ಇಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.
ವಿದ್ಯುತ್ ಹೋಗಿದ್ದರಿಂದಾಗಿ ಆಕ್ಸಿಜನ್ ಪೂರೈಕೆ ಸ್ಥಗಿತವಾಗಿದೆ. ಕತ್ತಲ ಕೂಪವಾಗಿದ್ದ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಬಟ್ಟೆಯಿಂದಲೇ ಗಾಳಿ ಬೀಸಿ ಸೋಂಕಿತರನ್ನು ಕಾಪಾಡಲು ಪ್ರಯತ್ನಿಸಿದ್ದಾರೆ. ಆದರೆ, ಎಷ್ಟೇ ಪ್ರಯತ್ನಪಟ್ಟರೂ ಶಿಕ್ಷಕನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.