ಪಡಿತರ ಪಡೆಯಲು ಬೆಡ್ಡಗುಡ್ಡ ಅಲೆದಾಡಿದ ಗ್ರಾಮಸ್ಥರು | ಸಿಎಂ ಸಾಹೇಬ್ರೇ, ಸ್ವಲ್ಪ ಇತ್ತ ನೋಡಿ - Mahanayaka
3:49 PM Wednesday 5 - February 2025

ಪಡಿತರ ಪಡೆಯಲು ಬೆಡ್ಡಗುಡ್ಡ ಅಲೆದಾಡಿದ ಗ್ರಾಮಸ್ಥರು | ಸಿಎಂ ಸಾಹೇಬ್ರೇ, ಸ್ವಲ್ಪ ಇತ್ತ ನೋಡಿ

kadaba
30/04/2021

ಕಡಬ: “ಗ್ರಾಮಕ್ಕೆ ನೆಟ್ ವರ್ಕ್ ಇಲ್ಲದಿದ್ದರೂ, ಹೆಸರಿಗೆ  ಡಿಜಿಟಲ್ ಇಂಡಿಯಾ”  ಈ ರೀತಿಯ ಹೊಸ ಗಾದೆ ಮಾತುಗಳು ಸೃಷ್ಟಿಯಾಗುವ ಕಾಲ ಇನ್ನು ಬಹಳ ದೂರ ಇಲ್ಲ ಎಂದೆನಿಸುತ್ತಿದೆ. ಇತ್ತೀಚೆಗೆ ರಾಜ್ಯದ ಆಹಾರ ಸಚಿವರು, ಆಹಾರ  ಇಲ್ಲದಿದ್ದರೆ ಸತ್ತು ಹೋಗಿ ಎಂದು ಹೇಳಿಕೆ ನೀಡಿದ್ದರು. ಆದರೆ ಅಂತಹ ಪರಿಸ್ಥಿತಿ ಬರಲು ರಾಜ್ಯದಲ್ಲಿ ಇನ್ನು ಹೆಚ್ಚು ಕಾಲ ಬೇಕಾಗಿಲ್ಲ ಎನ್ನುವ ಸಂದೇಶವನ್ನು ಈ ಘಟನೆ ನೀಡಿದೆಯೋ ಗೊತ್ತಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ಘಟನೆಯೊಂದನ್ನು ವಿವರಿಸಲು ಇಷ್ಟೆಲ್ಲ ಪೀಠಿಕೆ ಹಾಕಲೇ ಬೇಕಾಯಿತು. ಹೌದು… ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕೊಂಬಾರು ಗ್ರಾಮದ ಕೆಂಜಾಳ ಗ್ರಾಮಸ್ಥರು ತಮಗೆ ಸರ್ಕಾರದಿಂದ ಸಿಗುವ 2 ಕೆ.ಜಿ. ಅಕ್ಕಿಗಾಗಿ ಬೆಟ್ಟ ಗುಡ್ಡಗಳನ್ನು ಅಲೆಯುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಪಡಿತರ ವ್ಯವಸ್ಥೆ ಡಿಜಿಟಲ್ ಆಗಿದ್ದರಿಂದಾಗಿ, ಇರುವ ಸಮಸ್ಯೆಗಳು ಸಾಲದು ಎಂಬಂತೆ ಹೊಸ ಸಮಸ್ಯೆ ನಿರ್ಮಾಣವಾಗಿದೆ.

ಪಡಿತರ ಪಡೆಯಲೆಂದು ಇಲ್ಲಿನ ಗ್ರಾಮಸ್ಥರು ನ್ಯಾಯ ಬೆಲೆ ಅಂಗಡಿಗೆ ಬಂದಿದ್ದಾರೆ. ಆದರೆ, ಇಡೀ ಗ್ರಾಮದಲ್ಲಿ ಎಲ್ಲಿಯೂ ನೆಟ್ ವರ್ಕ್ ಇರಲಿಲ್ಲ. ಪರಿತರ ಅಂಗಡಿಯ ಸಿಬ್ಬಂದಿ ನೆಟ್ ವರ್ಕ್ ಇಲ್ಲದೇ ಗ್ರಾಮಸ್ಥರಿಗೆ ಅಕ್ಕಿ ವಿತರಿಸಲಾಗದ ಸ್ಥಿತಿಯಲ್ಲಿದ್ದರು. ಕೊನೆಗೆ ಯಾವುದೇ ಉಪಾಯ ಕಾಣದೇ ಲ್ಯಾಪ್ ಟಾಪ್ ಎತ್ತಿಕೊಂಡು ಗುಡ್ಡಗಳನ್ನು ಹತ್ತಿ, ನೆಟ್ ವರ್ಕ್ ಸಿಗುತ್ತದೆಯೇ ಎಂದು ಅಲೆದಾಡಿದ್ದಾರೆ. ಆದರೂ ಇಲ್ಲಿ ನೆಟ್ ವರ್ಕ್ ಸಿಕ್ಕಿಲ್ಲ ಎಂದು ವರದಿಯಾಗಿದೆ.

ಆಹಾರ ಸಚಿವರು ನೀಡಿದ ಹೇಳಿಕೆ ಸತ್ಯವಾಗುವ ಲಕ್ಷಣಗಳು ರಾಜ್ಯದಲ್ಲಿ ಕಂಡು ಬರುತ್ತಿದೆ. ಜನ ಆಹಾರವಿಲ್ಲದೇ ಸಾಯುವ ಸ್ಥಿತಿಗೆ ಸರ್ಕಾರದ ನಿಯಮಗಳು ತರಲಿದೆ. ಒಂದೋ ಈ ಗ್ರಾಮಗಳಿಗೆ ನೆಟ್ ವರ್ಕ್ ಸಮರ್ಪಕವಾಗಿ ಸಿಗಲು ಸರ್ಕಾರ ಕ್ರಮಕೈಗೊಳ್ಳಲಿ. ಇಲ್ಲವಾದರೆ, ಹಳೆಯ ಪದ್ಧತಿಯಂತೆಯೇ ಪಡಿತರ ವಿತರಿಸುವ ವ್ಯವಸ್ಥೆಗಳನ್ನು ತರಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಳೆದ ಲಾಕ್ ಡೌನ್ ಅವಧಿಯಲ್ಲಿ ಆನ್ ಲೈನ್ ಕ್ಲಾಸ್ ಗಾಗಿ ಇಲ್ಲಿನ ಮಕ್ಕಳು ಬೆಟ್ಟಗುಡ್ಡಗಳನ್ನು ಏರಿ ಕುಳಿತುಕೊಂಡಿದ್ದರು. ಆದರೆ, ಇದೀಗ ಸರ್ಕಾರ ಕೊಡುವ ಸಣ್ಣ ಪ್ರಮಾಣದ ಆಹಾರ ವಸ್ತುಗಳನ್ನು ಪಡೆಯಲು ಪೋಷಕರು ಬೆಟ್ಟಗುಡ್ಡ ಹತ್ತುತ್ತಿದ್ದಾರೆ. ನಮಗೆ ಪಡಿತರವೇ ಬೇಡ ಎಂದು ಜನರಿಗೆ ರೋಸಿ ಹೋಗುವ ಮಟ್ಟಕ್ಕೆ ಸರ್ಕಾರ ಜನರನ್ನು ಹಿಂಸಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ