ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ; ಪ್ರಥಮ ಪಿಯುಸಿ ಪರೀಕ್ಷೆ ರದ್ದು | ಶಿಕ್ಷಣ ಸಚಿವರು ಹೇಳಿದ್ದೇನು?
ಬೆಂಗಳೂರು: ಕೊವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಮೇ 24ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಾ ಸಚಿವ ಎಸ್.ಸುರೇಶ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪರೀಕ್ಷಾ ದಿನಾಂಕಗಳನ್ನು ಪರೀಕ್ಷೆಗಳು ಆರಂಭವಾಗುವುದಕ್ಕೆ 15-20 ದಿನಗಳ ಮುನ್ನವೇ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ಪರೀಕ್ಷೆಗೆ ಸಜ್ಜಾಗಿದ್ದ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಿರುವುದರಿಂದ ಯಾವುದೇ ಕಾರಣಕ್ಕೂ ವಿಚಲಿತರಾಗದೇ ಶ್ರದ್ಧೆಯಿಂದ ತಮ್ಮ ವಿದ್ಯಾಭ್ಯಾಸವನ್ನು ಎಂದಿನಂತೆ ಮುಂದುವರೆಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಇನ್ನೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ರದ್ದು ಮಾಡಲಾಗಿದ್ದು, ಈ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದ ಮುನ್ನ ಬ್ರಿಡ್ಜ್ ಕೋರ್ಸ್ ಗಳನ್ನು ನಡೆಸಲಾಗುತ್ತದೆ. ಹಾಗೆಯೇ ಇಲಾಖೆಯ ಯೂ-ಟ್ಯೂಬ್ ಚಾನಲ್ ಗಳ ಮೂಲಕ ಈಗಿನಿಂದಲೇ ಈ ಬ್ರಿಡ್ಜ್ ಕೋರ್ಸ್ ಗಳನ್ನು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ.