ಹಾಡಹಗಲೇ ಗ್ರಾಪಂ ಸದಸ್ಯನ ಬರ್ಬರ ಹತ್ಯೆ | ಕಾರಿನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ
ರಾಮನಗರ: ಹಾಡಹಗಲೇ ಗ್ರಾಮ ಪಂಚಾಯತಿ ಸದಸ್ಯರೊಬ್ಬರನ್ನು ದುಷ್ಕರ್ಮಿಗಳ ತಂಡ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
35 ವರ್ಷ ವಯಸ್ಸಿನ ಕುಮಾರ ಹತ್ಯೆಗೀಡಾದವರಾಗಿದ್ದಾರೆ. ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಬಿಡದಿಯ ಬಿ.ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಕುಮಾರ್ ಆಯ್ಕೆಯಾಗಿದ್ದರು. ಆದರೆ ಇದೀಗ ಅವರು ಹತ್ಯೆಗೀಡಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ ಬಿಡದಿ ಬಳಿಯ ಹೆಜ್ಜಾಲದ ರಚನಾ ಲಿಕ್ಕರ್ ಶಾಪ್ ಬಳಿಯಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕುಮಾರ್ ಅವರನ್ನು ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಬಿಡದಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಳೆಯ ವೈಷಮ್ಯ ಅಥವಾ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸದ್ಯ ಪ್ರಕರಣ ದಾಖಲಿಸಕೊಂಡಿರುವ ಬಿಡದಿ ಪೊಲೀಸರು ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಾಹಿತಿ ಸಂಗ್ರಹಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.