ಅಂತ್ಯಸಂಸ್ಕಾರಕ್ಕೆ ಗುಂಡಿ ತೋಡಲು ಕಡಿಮೆ ಹಣ ತೆಗೆದುಕೊಳ್ಳಿ ಎಂದಿದ್ದಕ್ಕೆ ಸುತ್ತಿಗೆಯಿಂದ ಹಲ್ಲೆ
ಬೆಂಗಳೂರು: ಅಂತ್ಯಕ್ರಿಯೆ ನಡೆಸಲು ಕಡಿಮೆ ಹಣ ನೀಡಿದ್ದಕ್ಕೆ ಕೋಪಗೊಂಡ ಸುಮಾರು 11ಕ್ಕೂ ಅಧಿಕ ದುಷ್ಕರ್ಮಿಗಳು ವ್ಯಕ್ತಿಗೆ ಸುತ್ತಿಗೆಯಿಂದ ಹಲ್ಲೆ ನಡೆಸಿರುವ ಘಟನೆ ವಿಲ್ನನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಲ್ಸನ್ ಗಾರ್ಡನ್ ನಿವಾಸಿ ಮೌಲಾಪಾಷಾ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಘಟನೆ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು 11 ಮಂದಿಯ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
ಶಾಹಿದ್ ಹಾಗೂ ಸಾದಿಕ್ ಎಂಬವರು ಬಂಧಿತ ಆರೋಪಿಗಳಾಗಿದ್ದು, ಮೇ 3ರಂದು ವಿಲ್ಸನ್ ಗಾರ್ಡನ್ ಸಮೀಪ ಬಡಾಮಕಾನ್ ಮೈದಾನದ ಸ್ಮಶಾನದಲ್ಲಿ ಗುಂಡಿ ತೋಡಲು ಸುಮಾರು 10ರಿಂದ 15 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ.
ವಿಲ್ಸನ್ ಗಾರ್ಡನ್ ನಿವಾಸಿ ಮೌಲಾಪಾಷಾ ಈ ಭಾಗದಲ್ಲಿ ಸಮಾಜ ಸೇವಕರಾಗಿ ಗುರುತಿಸಿಕೊಂಡವರಾಗಿದ್ದಾರೆ. ಹಾಗಾಗಿ ಅವರು ಸಾಮಾಜಿಕ ಕಳಕಳಿಯಿಂದ ಸ್ಥಳಕ್ಕೆ ಆಗಮಿಸಿ, ಕೊರೊನಾದಿಂದ ಬಡವರ ಬಳಿಯಲ್ಲಿ ಹಣ ಇಲ್ಲ. ಗುಂಡಿ ತೋಡಲು ಸ್ವಲ್ಪ ಕಡಿಮೆ ಹಣ ತೆಗೆದುಕೊಳ್ಳಿ ಎಂದು ಮನವಿ ಮಾಡಿ 1,500 ಮಾತ್ರ ನಿಗದಿಪಡಿಸಿದರು.
ಕೈಗೆ ಬರುತ್ತಿದ್ದ ಸಾವಿರಾರು ರೂಪಾಯಿ ಮೌಲಾಪಾಷಾ ಅವರಿಂದ ಕಳೆದುಕೊಳ್ಳುವಂತಾಯ್ತು ಎಂದು ಆಕ್ರೋಶ ವ್ಯಕ್ತಪಡಿಸಿದ ದುಷ್ಕರ್ಮಿಗಳು ಮೌಲಾಪಾಷಾ ಅವರ ಮುಖಕ್ಕೆ ಸುತ್ತಿಗೆಯಿಂದ ಹೊಡೆದಿದ್ದು, ಹೊಡೆತದ ಪರಿಣಾಮ ಅವರ ಹಲ್ಲುಗಳು ಉದುರಿ ಹೋಗಿವೆ. ಘಟನೆ ಸಂಬಂಧ ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.