ಕೊರೊನಾ ಇದೆ ಎಂದು ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿ ಪರಾರಿಯಾದ ಪುತ್ರ!
ಆಗ್ರಾ: ಕೊರೊನಾ ಭೀತಿಯಿಂದ ಮಗನೋರ್ವ ತನ್ನ ತಾಯಿಯನ್ನು ಕೋಣೆಯೊಳಗೆ ಕೂಡಿ ಹಾಕಿದ ಘಟನೆ ಆಗ್ರಾ ಜಿಲ್ಲೆಯ ಕಮಲಾ ನಗರದಲ್ಲಿ ನಡೆದಿದ್ದು, ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿದ ಬಳಿಕ ತನ್ನ ಪತ್ನಿ ಮಕ್ಕಳನ್ನು ಕರೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ರಾಕೇಶ್ ಅಗರ್ವಾಲ್ ತನ್ನ ವಯಸ್ಸಾದ ತಾಯಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ಹೋದ ಪಾಪಿ ಪುತ್ರನಾಗಿದ್ದಾನೆ. ವೃದ್ಧೆಯ ಪತಿ ಇತ್ತೀಚೆಗೆ ಕೊರೊನಾದಿಂದ ಮೃತಪಟ್ಟಿದ್ದರು. ಪತಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಹಿಂದಿರುಗಿದಾಗ ಪುತ್ರ ವೃದ್ಧೆಯನ್ನು ಕೋಣೆಯಲ್ಲಿ ಬಂಧನದಲ್ಲಿಟ್ಟು, ಪತ್ನಿ ಹಾಗೂ ಮಕ್ಕಳೊಂದಿಗೆ ಸ್ಥಳದಿಂದ ಯಾರಿಗೂ ತಿಳಿಯದಂತೆ ಪರಾರಿಯಾಗಿದ್ದಾನೆ.
ಈ ವಿಚಾರ ಮಹಿಳೆಯ ಮೊಮ್ಮಗ ಅನುಪ್ ಗರ್ಗ್ ಗಮನಕ್ಕೆ ಬಂದಿದ್ದು, ಆತ ನೆರೆಯವರ ಸಹಾಯದಿಂದ ಬಾಗಿಲು ಮುರಿದು ಅಜ್ಜಿಯನ್ನು ರಕ್ಷಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದಾನೆ.
ಘಟನೆಯ ಬಗ್ಗೆ ವೃದ್ಧೆಯನ್ನು ಪ್ರಶ್ನಿಸಿದಾಗ ತನ್ನ ಸ್ವಂತ ಮಗ ನನ್ನೊಂದಿಗೆ ಬಹಳ ಅಸಭ್ಯವಾಗಿ ವರ್ತಿಸುತ್ತಾನೆ. ನನಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ಆದರೂ ಕೋಣೆಗೆ ಬೀಗ ಹಾಕಿ ತಿಳಿಸದೇ ಮನೆಯಿಂದ ಹೊರಟು ಹೋಗಿದ್ದಾನೆ ಎಂದು ದೂರಿದ್ದಾರೆ.