“ಇನ್ನು ಒಂದು ತಿಂಗಳಲ್ಲಿ ರಾಜ್ಯದ ಪರಿಸ್ಥಿತಿ ಚಿಂತಾಜನಕವಾಗಲಿದೆ”
ಮಂಗಳೂರು: ಕೊರೊನಾಕ್ಕೆ ಲಾಕ್ ಡೌನ್ ಪರಿಹಾರ ಅಲ್ಲ. ಅದು ಪೂರ್ವ ತಯಾರಿಗೆ ಇರುವ ಸಮಯ. ಸರ್ಕಾರ ಯಾವುದೇ ಪೂರ್ವ ತಯಾರಿಯಾಗುತ್ತಿಲ್ಲ. ಹಾಗಾಗಿ ಮುಂದಿನ ಒಂದು ತಿಂಗಳಲ್ಲಿ ರಾಜ್ಯದ ಪರಿಸ್ಥಿತಿ ಚಿಂತಾಜನಕವಾಗಲಿದೆ ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಲೇ ಪೂರ್ವ ತಯಾರಿಗೆ ಆದ್ಯತೆ ನೀಡಿ, ಮನೆ ಮನೆಗಳಿಗೆ ಲಸಿಕೆ ನೀಡುವ ಕಾರ್ಯ ಮಾಡಬೇಕಿದೆ ಎಂದು ಯು.ಟಿ.ಖಾದರ್ ಸಲಹೆ ನೀಡಿದರು.
ಸರ್ಕಾರ ಪೂರ್ವ ಯೋಜನೆ ಇಲ್ಲದೇ ಲಾಕ್ ಡೌನ್ ಮಾಡಿದೆ. ರಾಜ್ಯದಲ್ಲಿ ಯಾವುದೇ ರೀತಿಯಲ್ಲಿ ವೆಂಟಿಲೇಟರ್, ಆಕ್ಸಿಜನ್ ಬೆಡ್ ಗಳ ವ್ಯವಸ್ಥೆಯಲ್ಲಿ ಹೆಚ್ಚಳವಾಗಿಲ್ಲ. ಲಾಕ್ ಡೌನ್ ಮಾಡಿದರೂ ಪರವಾಗಿಲ್ಲ, ಆದರೆ, ಜನರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯದಲ್ಲಿ ಲಾಕ್ ಡೌನ್ ಮಾಡಿದ್ದರೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿಲ್ಲ. ಸರ್ಕಾರ ಕೇವಲ ಲಾಕ್ ಡೌನ್ ಮಾಡುವುದಲ್ಲ. ಇಲ್ಲದೇ ಸಂಕಷ್ಟದಲ್ಲಿರುವವರಿಗೆ ಆಹಾರ ನೀಡಬೇಕು ಎಂದು ಅವರು ಪ್ರಶ್ನಿಸಿದರು.
ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗಿದೆ. ಕೇರಳದಿಂದ ಬರುವ ಆಕ್ಸಿಜನ್ ಅನ್ನು ಅಲ್ಲಿನ ಸರ್ಕಾರ ತಡೆಹಿಡಿದಿದೆ. ಹೀಗಾಗಿ ಕೇಂದ್ರಕ್ಕೆ ಒತ್ತಡ ಹಾಕಿ ಹೆಚ್ಚುವರಿ ಆಕ್ಸಿಜನ್ ತರಿಸಬೇಕಿದೆ ಎಂದ ಅವರು, ದಕ್ಷಿಣ ಕನ್ನಡ ಜಿಲ್ಲಾ ಸಂಸದರು ಯಾಕೆ ಒತ್ತಡ ಹಾಕುತ್ತಿಲ್ಲ ಎಂದ ಪ್ರಶ್ನಿಸಿದರು.