“25 ಬಿಜೆಪಿ ಸಂಸದರು ಎಲ್ಲಿ ಕತ್ತೆ ಕಾಯುತ್ತಿದ್ದಿರಾ?”
ಕಲಬುರ್ಗಿ: ಕೊವಿಡ್ ನಿಂದ ಪ್ರತಿ ದಿನ ನೂರಾರು ಜನರು ಸಾಯುತ್ತಿದ್ದಾರೆ. ಆದರೆ, ರಾಜ್ಯಕ್ಕೆ ಅಗತ್ಯವಾದ ಆಕ್ಸಿಜನ್ ನ್ನು ಕೇಂದ್ರದಿಂದ ಕೊಡಿಸಬೇಕಿದ್ದ 25 ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ? ಕತ್ತೆ ಕಾಯುತ್ತಿದ್ದಾರಾ? ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ತರಾಟೆಗೆತ್ತಿಕೊಂಡಿದ್ದಾರೆ.
ನಗರದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಜನರು ಒಳಿತನ್ನು ಬಯಸಿ ಅತಿ ಹೆಚ್ಚು ಸಂಸದರನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳಿಸಿದ್ದಾರೆ. ಆದರೆ, ಜನರ ಜೀವಗಳು ಹೋಗುತ್ತಿರುವ ವೇಳೆ ರಾಜ್ಯದಲ್ಲೇ ಉತ್ಪಾದನೆಯಾಗುವ ಆಮ್ಲಜನಕವನ್ನು ಇಲ್ಲಿಯೇ ಬಳಕೆಗೆ ಬಿಡಬೇಕಿದ್ದ ಕೇಂದ್ರ ಸರ್ಕಾರ ಅತಿ ಕಡಿಮೆ ಪ್ರಮಾಣ ನಿಗದಿ ಮಾಡಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಕರ್ನಾಟಕ ಹೈಕೋರ್ಟ್ 1200 ಟನ್ ಆಮ್ಲಜನಕ ನೀಡುವಂತೆ ತಾಕೀತು ಮಾಡಿದಾಗಲೂ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅಂತಿಮವಾಗಿ ಹೈಕೋರ್ಟ್ ನಿರ್ಧಾರ ಸರಿ ಎಂದಿದ್ದರಿಂದ ರಾಜ್ಯದ ಸಾವಿರಾರು ಜನರ ಜೀವ ಉಳಿಯಲಿದೆ ಎಂದು ಅವರು ತಿಳಿಸಿದರು.
ಲಸಿಕೆ ಕೊರತೆಯಿಂದ ಜಿಲ್ಲೆಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಹಿನ್ನಡೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಅವರು ಲಸಿಕಾ ಉತ್ಸವಕ್ಕೆ ಅದು ಹೇಗೆ ಕರೆ ನೀಡಿದರು ಎಂದು ಪ್ರಶ್ನಿಸಿದ ಅವರು, ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 6,43,232 ಜನರಿಗೆ ಲಸಿಕೆ ನೀಡುವ ಗುರಿಯಿದ್ದು, ಮೊದಲ ಡೋಸ್ 2,10,280 ಮತ್ತು ಎರಡನೇ ಡೋಸ್ 45,947 ಜನರಿಗೆ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈವರೆಗೆ ಶೇ 22ರಷ್ಟು ಮಾತ್ರ ಪ್ರಗತಿಯಾಗಿದೆ. ಕೋವಿನ್ ಆಯಪ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಮುಂದಾದರೆ ಕರ್ನಾಟಕಕ್ಕೆ ಲಸಿಕೆಯೇ ಇಲ್ಲ ಎನ್ನುತ್ತದೆ. ಅದೇ, ಪ್ರಧಾನಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಸಾಕಷ್ಟು ಲಸಿಕೆ ಲಭ್ಯವಿದೆ. ಅವರ ಜೀವಗಳು ಕರ್ನಾಟಕದ ಜನರ ಜೀವನಕ್ಕಿಂತ ಶ್ರೇಷ್ಠವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ರೋಗಿಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಜಿಲ್ಲಾ ಕಾಂಗ್ರೆಸ್ ಎರಡು ಆಂಬುಲೆನ್ಸ್‌ಗಳನ್ನು ನೀಡಿದೆ. 24 ಗಂಟೆಯೂ ಆಂಬುಲೆನ್ಸ್ ಸೇವೆ ಲಭ್ಯವಿರಲಿದ್ದು, ಆಮ್ಲಜನಕ ಸಹಿತ ಐಸಿಯು ವ್ಯವಸ್ಥೆ ಹೊಂದಿದೆ. ಒಟ್ಟು 5 ಆಂಬುಲೆನ್ಸ್‌ಗಳನ್ನು ಜಿಲ್ಲೆಯ ಜನರಿಗೆ ನೀಡುವ ಯೋಚನೆ ಇದೆ. ಅಗತ್ಯವಿರುವವರು ದೂರವಾಣಿ ಸಂಖ್ಯೆ 63629 43441ಗೆ ಕರೆ ಮಾಡಿ, ಆಂಬುಲೆನ್ಸ್ ಸೇವೆ ಪಡೆಯಬಹುದು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.