ಗೋಮೂತ್ರ ಕುಡಿದು ಕೊರೊನಾದಿಂದ ರಕ್ಷಣೆ ಪಡೆಯಿರಿ ಎಂದ ಬಿಜೆಪಿ ಶಾಸಕ
ಬಲಿಯಾ: ಗೋಮೂತ್ರ ಕುಡಿಯುವುದರಿಂದ ಕೊವಿಡ್ 19 ರೋಗದಿಂದ ರಕ್ಷಣೆ ಪಡೆಯಬಹುದು ಎಂದು ಎಂದು ಉತ್ತರಪ್ರದೇಶದ ಬಿಜೆಪಿ ಶಾಸಕರೊಬ್ಬರು ಹೇಳಿದ್ದು, ಸ್ವತಃ ಗೋಮೂತ್ರ ಕುಡಿದು, ಜನರು ಕೂಡ ಕುಡಿಯುವಂತೆ ಪ್ರೇರೇಪಿಸಿದ್ದಾರೆ.
ಬಲಿಯಾ ಜಿಲ್ಲೆಯ ಬೈರಿಯಾ ಮೂಲದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್, ಈ ಹುಚ್ಚಾಟ ಮೆರೆದ ಶಾಸಕರಾಗಿದ್ದು, ಗೋಮೂತ್ರವನ್ನು ಹೇಗೆ ಕುಡಿಯಬೇಕು ಎಂಬುದನ್ನು ಸಿಂಗ್ ವಿಡಿಯೊ ಸಮೇತ ತೋರಿಸಿದ್ದು, ಒಂದು ಲೋಟ ನೀರಿನೊಂದಿಗೆ ಬೆರೆಸಿ ಕುಡಿಯಬೇಕು ಬೇಕು ಎಂದು ಸಲಹೆ ಕೂಡ ನೀಡಿದ್ದಾರೆ.
ದಿನ 18 ತಾಸು ಕೆಲಸ ಮಾಡುತ್ತಿದ್ದರೂ ಪ್ರತಿದಿನ ಗೋಮೂತ್ರ ಕುಡಿಯುವುದರಿಂದ ನಾನು ಆರೋಗ್ಯವಂತನಾಗಿದ್ದೇನೆ. ಜನರು ಇದನ್ನು ತಮ್ಮ ದಿನಚರಿಯಲ್ಲಿ ಅನುಸರಿಸುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಎರಡು-ಮೂರು ಮುಚ್ಚಳದಷ್ಟು ಗೋಮೂತ್ರ ಒಂದು ಲೋಟ ನೀರಿನಲ್ಲಿ ಬೆರೆಸಿ ಸೇವಿಸಬೇಕು. ಅದಾದ ಬಳಿಕ ಅರ್ಧ ಗಂಟೆ ಬೇರೆ ಏನನ್ನೂ ಸೇವಿಸಬಾರದು ಎಂದು ಅವರು ಗೋಮೂತ್ರ ಪ್ರಿಯರಿಗೆ ಸಲಹೆ ಮಾಡಿದ್ದಾರೆ.
ವಿಜ್ಞಾನವು ಇದನ್ನು ನಂಬುತ್ತಿದೆಯೇ ಇಲ್ಲವೋ ಗೊತ್ತಿಲ್ಲ. ಆದರೆ ತಾನು ಮಾತ್ರ ಗೋಮೂತ್ರದಲ್ಲಿ ಸಂಪೂರ್ಣ ನಂಬಿಕೆಯನ್ನಿರಿಸಿದ್ದೇನೆ. ಕೋವಿಡ್-19 ಮಾತ್ರವಲ್ಲದೆ ಗೋ ಮೂತ್ರವು ಇತರೆ ಅನೇಕ ರೋಗಗಳ ವಿರುದ್ಧ ವಿಶೇಷವಾಗಿಯೂ ಹೃದಯ ಸಂಬಂಧ ಕಾಯಿಲೆಯ ವಿರುದ್ಧ ‘ಸೂಪರ್ ಪವರ್’ ಆಗಿದೆ ಎಂದು ಹೇಳಿದ್ದಾರೆ.