ಬೆಳ್ತಂಗಡಿ: ಮನೆ ಬಿಟ್ಟು ಹೋಗಿದ್ದ ವ್ಯಕ್ತಿ 26 ವರ್ಷಗಳ ಬಳಿಕ ಮನೆ ಸೇರಿದ!
ಬೆಳ್ತಂಗಡಿ: ಮನೆ ಬಿಟ್ಟು ಹೋಗಿದ್ದ ವ್ಯಕ್ತಿಯೊಬ್ಬರು 26 ವರ್ಷಗಳ ಬಳಿಕ ತನ್ನ ಕುಟುಂಬಸ್ಥರನ್ನು ಸೇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದಲ್ಲಿ ನಡೆದಿದೆ.
20 ವರ್ಷ ವಯಸ್ಸಿರುವಾಗಿ ಮನೆ ತೊರೆದಿದ್ದ ಶಿವಪ್ಪ ಪೂಜಾರಿ ಎಂಬವರು ಇದೀಗ ತಮ್ಮ 46ನೇ ವಯಸ್ಸಿನಲ್ಲಿ ಮನೆಗೆ ಮರಳಿದ್ದಾರೆ. ಅಂದರೆ, 26 ವರ್ಷಗಳ ಬಳಿಕ ಅವರು ಮರಳಿ ತಮ್ಮ ಮನೆಗೆ ಬಂದಿದ್ದಾರೆ.
20ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದ ಶಿವಪ್ಪ, ಮಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಆ ಬಳಿಕ ಉದ್ಯೋಗ ಅರಸುತ್ತಾ ತರಿಕೆರೆ, ಮೈಸೂರು ಕಡೆಗೆ ಹೋಗಿದ್ದರು. ಆ ಬಳಿಕ ಮನೆಯವರ ಸಂಪರ್ಕಕ್ಕೆ ಅವರು ಸಿಕ್ಕಿರಲಿಲ್ಲ.
ಮಗ ಮನೆ ಬಿಟ್ಟು ಹೋಗಿ ವರ್ಷಗಳೇ ಕಳೆದರೂ ವಾಪಸ್ ಆಗದೇ ಇರುವುದನ್ನು ಕಂಡ ಹೆತ್ತವರು ಮಗ ಬರುವ ನಿರೀಕ್ಷೆಯನ್ನೇ ಕಳೆದುಕೊಂಡಿದ್ದರು. ಆದರೆ, ಮೈಸೂರಿನ ಹೊಟೇಲ್ ನಲ್ಲಿ ಅಡುಗೆಯ ಕೆಲಸ ಮಾಡುತ್ತಿದ್ದ ಶಿವಪ್ಪ, ಲಾಕ್ ಡೌನ್ ನಿಂದಾಗಿ ಹೊಟೇಲ್ ಬಂದ್ ಆದ ಕಾರಣ ಲಾರಿಯೊಂದನ್ನು ಹತ್ತಿ ನೇರವಾಗಿ ಬಂಟ್ವಾಳಕ್ಕೆ ಬಂದಿದ್ದಾರೆ.
ಬಂಟ್ವಾಳ ಸಮೀಪದ ಮಾರಿಪಳ್ಳ ಬಸ್ ನಿಲ್ದಾಣದಲ್ಲಿ ಶಿವಪ್ಪ ಪೂಜಾರಿ ಅಸ್ವಸ್ಥಗೊಂಡು ಬಿದ್ದಿದ್ದರು. ಈ ವೇಳೆ ಇಲ್ಲಿನ ಮುಸ್ಲಿಮ್ ಯುವಕರು ಶಿವಪ್ಪ ಅವರಿಗೆ ಆರೈಕೆ ಮಾಡಿ, ಊಟ ಕೊಡಿಸಿದ್ದಾರೆ. ಮನೆಯ ಬಗ್ಗೆ ವಿಚಾರಿಸಿದಾಗ ಬೆಳಾಲಿನಲ್ಲಿ ಮನೆ ಇರುವುದಾಗಿ ತಿಳಿಸಿದ್ದರು. ಹಾಗಾಗಿ ತಕ್ಷಣವೇ ವಾಟ್ಸಾಪ್ ಮೂಲಕ ಫೋಟೋ ಹಾಕಿ, ಮಾಹಿತಿ ನೀಡಲು ಕೋರಿದರು. ಈ ವೇಳೆ ಬೆಳಾಲಿನ ಯುವಕರು ಮನೆ ಮಂದಿಯನ್ನು ಸಂಪರ್ಕಿಸಿದಾಗ ಶಿವಪ್ಪ ನಾಪತ್ತೆಯಾಗಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ. ತಕ್ಷಣವೇ ತಾರದಡಿ ಆದಂ, ಆದರ್ಶನಗರದ ಉಸ್ಮಾನ್, ಕಬೀರ್, ಫರಂಗಿಪೇಟೆಯ ಮುಸ್ತಫಾ ಕೌಸರಿ ಅವರು , ಮೇ 6ರಂದು ಶಿವಪ್ಪ ಅವರನ್ನು ಮನೆಗೆ ಕರೆದುಕೊಂಡು ಬಂದು ಕುಟುಂಬಕ್ಕೆ ಸೇರಿಸಿದ್ದಾರೆ.
ಇನ್ನೂ ಶಿವಪ್ಪ ಅವರ ತಂದೆ, ತಾಯಿ ಮೂರು ತಿಂಗಳ ಹಿಂದೆಯಷ್ಟೇ ಸಾವನ್ನಪ್ಪಿದ್ದಾರೆ. ಇವರಿಗೆ ಮೂವರು ಸಹೋದರರು ಮತ್ತು ಸಹೋದರಿಯರು ಇದ್ದಾರೆ. ಇನ್ನೂ ಶಿವಪ್ಪ ಪೂಜಾರಿ ತರೀಕರೆಯ ಮೀನಾಕ್ಷಿ ಎಂಬವರೊಂದಿಗೆ ವಿವಾಹವಾಗಿದ್ದಾರೆ ಎಂದು ತಿಳಿದು ಬಂದಿದೆ. ಒಬ್ಬ ಪುತ್ರ ಹಾಗೂ ಪುತ್ರಿ ಇವರಿಗಿದ್ದಾರೆ ಎಂದು ತಿಳಿದು ಬಂದಿದೆ.