ಕೊವಿಡ್ ಗೆ ಹೆದರಿ ಮೃತನ ಸಮೀಪವೂ ಸುಳಿಯಲಿಲ್ಲ ಜನ | PFI ಕಾರ್ಯಕರ್ತರಿಂದ ಅಂತ್ಯಸಂಸ್ಕಾರ - Mahanayaka
10:19 AM Thursday 12 - December 2024

ಕೊವಿಡ್ ಗೆ ಹೆದರಿ ಮೃತನ ಸಮೀಪವೂ ಸುಳಿಯಲಿಲ್ಲ ಜನ | PFI ಕಾರ್ಯಕರ್ತರಿಂದ ಅಂತ್ಯಸಂಸ್ಕಾರ

chamarajanagara pfi
10/05/2021

ಚಾಮರಾಜನಗರ: ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ಜ್ವರದಿಂದ ಸಾವನ್ನಪ್ಪಿದ್ದು, ಇವರು ಕೊರೊನಾದಲ್ಲಿ ಸಾವಿಗೀಡಾಗಿರಬಹುದು ಎಂದು ಭೀತರಾದ ಗ್ರಾಮಸ್ಥರು ಸಮೀಪವೂ ಸುಳಿಯಲು ಮುಂದಾಗದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಟಗರುಪುರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಟಗರಪುರ ಗ್ರಾಮದಲ್ಲಿ ಏಕಾಂಗಿ ವಾಸಿಸುತ್ತಿದ್ದ  60 ವರ್ಷ ವಯಸ್ಸಿನ ಮಹದೇವ ಅವರು ಜ್ವರದಿಂದ ಮೂರು ದಿನಗಳ ಕಾಲ ಬಳಲಿದ್ದರು. ಅವರು ಕೊವಿಡ್ ಟೆಸ್ಟ್ ಕೂಡ ಮಾಡಿಸಿರಲಿಲ್ಲ ಎಂದು ತಿಳಿದು ಬಂದಿದೆ. ಅವರು ಕೊವಿಡ್ ನಿಂದಲೇ ಮೃತಪಟ್ಟಿರಬಹುದು ಎಂದು ಭೀತರಾದ ಗ್ರಾಮಸ್ಥರು, ಅವರ ಮನೆಯ ಬಾಗಿಲನ್ನು ತೆರೆಯುವ ಪ್ರಯತ್ನವನ್ನು ಕೂಡ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ.

ಇದೇ ವೇಳೆಯಲ್ಲಿ ಸ್ಥಳೀಯ ಯುವಕರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಸಂಘಟನೆಯ ಕಾರ್ಯಕರ್ತರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ಸ್ಥಳದಿಂದ ಅಂತ್ಯಸಂಸ್ಕಾರಕ್ಕೆ ಸಾಗಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಗ್ರಾಮಸ್ಥರು ಯಾರು ಕೂಡ ಸ್ವಲ್ಪವೂ ಸಹಾಯ ಮಾಡಲು ಮುಂದಾಗಲಿಲ್ಲ ಎಂದು ತಿಳಿದು ಬಂದಿದೆ.

ಇನ್ನೂ ಮೃತ ವ್ಯಕ್ತಿಯ ಜಮೀನಿನಲ್ಲಿಯೇ ಹೂಳುವ ಮೂಲಕ ಅಂತ್ಯಕ್ರಿಯೆ ನಡೆಸಲು ಸಂಘಟನೆಯವರು ನಿರ್ಧರಿಸಿದಾಗ ಗ್ರಾಮಸ್ಥರು ವಿರೋಧಿಸಿದ್ದಾರೆ. ಬಳಿಕ ಕಾಡಂಚಿನಲ್ಲಿ ಮೃತದೇಹಕ್ಕೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಇತ್ತೀಚಿನ ಸುದ್ದಿ