ಐದು ದಿನಗಳ ಅಂತರದಲ್ಲಿ ತಂದೆ-ತಾಯಿ ಕೊರೊನಾಕ್ಕೆ ಬಲಿ | ಅನಾಥಳಾದ 4 ವರ್ಷದ ಮಗಳು
10/05/2021
ಚಾಮರಾಜನಗರ: ಐದು ದಿನಗಳ ಅಂತರದಲ್ಲಿ ತಂದೆ, ತಾಯಿ ಇಬ್ಬರು ಕೂಡ ಕೊರೊನಾ ವೈರಸ್ ಗೆ ಬಲಿಯಾಗಿರುವ ಘಟನೆ ನಡೆದಿದ್ದು, ನಾಲ್ಕು ವರ್ಷದ ಬಾಲಕಿ ತನ್ನ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದಾಳೆ.
ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆಟೋ ಚಾಲಕ ಗುರು ಎಂಬವರಿಗೆ 10 ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಮೇ 5ರಂದು ಅವರು ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದರು. ಇದಾದ ಬಳಿಕ ಪತ್ನಿ ರಶ್ಮಿ ಅವರಿಗೂ ಸೋಂಕು ತಗಲಿದ್ದು, ಮೇ 9ರಂದು ಅವರೂ ಮೃತಪಟ್ಟಿದ್ದಾರೆ.
ಗುರು ಅವರಿಗೆ ತಂದೆ-ತಾಯಿ ಒಡಹುಟ್ಟಿದವರು ಯಾರೂ ಇಲ್ಲ. ರಶ್ಮಿ ಅವರ ಆರೈಕೆಗೆ ಬಂದಿದ್ದ ಅವರ ತಂದೆ ತಾಯಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ರಶ್ಮೀ ಅವರ ತಂಗಿಯ ಮನೆಯಲ್ಲಿ ಬಾಲಕಿ ವಾಸಿಸುತ್ತಿದ್ದಾಳೆ. ಈ ದುರಂತ ಕಂಡು ಜನರು ಕನಿಕರ ವ್ಯಕ್ತಪಡಿಸುತ್ತಿದ್ದಾರೆ.