ಗೋಮೂತ್ರ ಕುಡಿಯುವವರಿಗೆ ಸೆಗಣಿ ಲೇಪಿಸಿಕೊಳ್ಳುವವರಿಗೆ ಎಚ್ಚರಿಕೆ ನೀಡಿದ ವೈದ್ಯರು!
ನವದೆಹಲಿ: ದನದ ಸೆಗಣಿ(ಮಲ) ಮೈಗೆ ಹಚ್ಚಿಕೊಳ್ಳವುದು ಮತ್ತು ಮೂತ್ರವನ್ನು ಕುಡಿಯುವವರಿಗೆ ಭಾರತದ ಪರಿಣತ ವೈದ್ಯರು ಎಚ್ಚರಿಕೆಯನ್ನು ನೀಡಿದ್ದು, ನೀವು ಬೇರೆಯೇ ಕಾಯಿಲೆಗಳಿಗೆ ತುತ್ತಾಗುತ್ತೀರಿ ಎಂದು ಅವರು ಹೇಳಿದ್ದಾರೆ.
ಕೊರೊನಾದಿಂದ ಪಾರಾಗಲು ದನದ ಮೂತ್ರ ಕುಡಿಯಲು ಬಿಜೆಪಿ ಬೆಂಬಲಿಗ ಸಂಘಟನೆಗಳು ಜನರನ್ನು ಪ್ರೇರೇಪಿಸುತ್ತಿವೆ. ವಿ ಎಚ್ ಪಿ, ಬಜರಂಗದಳ, ಆರೆಸ್ಸೆಸ್ ಹಾಗೂ ಬಿಜೆಪಿ ನಾಯಕರು ಕೊರೊನಾದಿಂದ ಮುಕ್ತರಾಗಲು ಗೋಮೂತ್ರ ಕುಡಿಯಬೇಕು ಎಂದು ಹೇಳುತ್ತಿದ್ದಾರೆ. ಇದನ್ನು ನಂಬಿ ಸಾಕಷ್ಟು ಅಮಾಯಕರು ಮೈಗೆ ಸೆಗಣಿ ಹಚ್ಚಿಕೊಳ್ಳುವುದು, ಮೂತ್ರ ಕುಡಿಯುವುದು ಮೊದಲಾದ ಹುಚ್ಚಾಟಗಳನ್ನು ಪ್ರದರ್ಶಿಸುತ್ತಿದ್ದಾರೆ.
ಇದರಲ್ಲೂ ಗುಜರಾತ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗೋವಿನ ಸೆಗಣಿಯನ್ನು ಮೈಗೆ ಹಚ್ಚಿಕೊಳ್ಳುವುದು ಮತ್ತು ಮೂತ್ರ ಕುಡಿಯುವುದು ಮೊದಲಾದ ಅತಿರೇಕದ ನಡತೆ ತೋರುತ್ತಿದ್ದಾರೆ. ಇದರಿಂದಾಗಿ ಬೇರೆಯೇ ಅನಾರೋಗ್ಯಗಳಿಗೆ ಜನರು ತುತ್ತಾಗುವ ಸಾಧ್ಯತೆಗಳಿವೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಕೊರೊನಾವನ್ನು ದನದ ಮೂತ್ರದಿಂದ ವಾಸಿ ಮಾಡಬಹುದು ಎನ್ನುವುದಕ್ಕೆ ಯಾವುದೇ ರೀತಿಯ ಆಧಾರಗಳಿಲ್ಲ. ಇತರ ಪ್ರಾಣಿಗಳ ಮೂತ್ರಕ್ಕಿಂತ ದನದ ಮೂತ್ರದಲ್ಲಿ ಯಾವುದೇ ಔಷಧಿಯ ಗುಣಗಳು ಕೂಡ ಇಲ್ಲ. ಯಾವುದೇ ಪ್ರಾಣಿಯ ಮಲ ಮೂತ್ರಗಳಲ್ಲಿ ರೋಗಾಣುಗಳು ಇರುತ್ತವೆ. ಯಾವುದೇ ರೋಗವನ್ನು ಗುಣ ಮಾಡುವ ಶಕ್ತಿ ಇರುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಜೊತೆಗೆ ಇದರಿಂದ ಬೇರೆಯದ್ದೇ ರೋಗಗಳಿಗೆ ಜನರು ತುತ್ತಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.