ಮುಂದಿನ 6 ಗಂಟೆಗಳಲ್ಲಿ ತೌಕ್ತೆ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ | ಹವಾಮಾನ ಇಲಾಖೆ ಎಚ್ಚರಿಕೆ
ನವದೆಹಲಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ತೌಕ್ತೆ ಚಂಡಮಾರುತದ ಅಬ್ಬರ ಇಂದು ಕೂಡ ತಗ್ಗಿಲ್ಲ. ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ತನ್ನ ಆರ್ಭಟ ತೋರಿಸಿದ ಬಳಿಕ ಇದೀಗ ಚಂಡಮಾರುತ ಗುಜರಾತ್ ಕಡೆಗೆ ಪ್ರಯಾಣ ಆರಂಭಿಸಿದೆ.
ಮುಂದಿನ 6 ಗಂಟೆಗಳಲ್ಲಿ ತೌಕ್ತೆ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಳ್ಳಲಿದ್ದು, ಪ್ರಸ್ತುತ ಗೋವಾದ ನೈರುತ್ಯಕ್ಕೆ 170 ಕಿ.ಮೀ. ದೂರದಲ್ಲಿ, ಮುಂಬೈಗೆ 520 ಕಿ.ಮೀ. ದಕ್ಷಿಣದಲ್ಲಿದೆ.
ಮೇ 18ರ ಮುಂಜಾನೆ ಉತ್ತರ-ವಾಯುವ್ಯ ಮುಖವಾಗಿ ಸಾಗಿ ಗುಜರಾತ್ ನ ಪೋರ್ ಬಂದರ್ ಮತ್ತು ನಲಿಯಾ ಕರಾವಳಿಯನ್ನು ದಾಡುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ನಿನ್ನೆ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ತೌಕ್ತೆ ಚಂಡಮಾರುತ ದೋಣಿಯನ್ನು ದಡಕ್ಕೆ ತರಲು ಹೋದ ಮೀನುಗಾರನನ್ನು ಬಲಿ ಪಡೆದಿದೆ. ಕೇರಳದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನೂರಾರು ಮನೆಗಳು, ಕಟ್ಟಡಗಳು, ಹೊಲಗಳು, ತೋಟಗಳನ್ನು ಚಂಡಮಾರುತ ನಾಶ ಮಾಡಿದೆ.
ಇನ್ನೂ ಭಾರತೀಯ ವಾಯುಪಡೆ ಜನರ ಸಹಕಾರಕ್ಕೆ ಬಂದಿದ್ದು, 18 ಹೆಲಿಕಾಫ್ಟರ್ ಗಳನ್ನು ರಕ್ಷಣಾ ಕಾರ್ಯಕ್ಕೆ ಇಳಿಸಿದ್ದು, ಕೇರಳ, ತಮಿಳುನಾಡು, ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ 50ಕ್ಕೂ ಹೆಚ್ಚು ವಿಪತ್ತು ಪರಿಹಾರ ಹಾಗೂ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ.