“ಸಾಯೋರು ಎಲ್ಲಾದರೂ ಸಾಯಲಿ” ಎನ್ನುತ್ತಿರುವ ಬಿಜೆಪಿ ಶಾಸಕರೊಬ್ಬರ ವಿಡಿಯೋ ವೈರಲ್
16/05/2021
ಚಿತ್ರದುರ್ಗ: ಆಕ್ಸಿಜನ್ ಬೆಡ್ ವಿಚಾರವಾಗಿ ಹೊಳಲ್ಕೆರೆ ಬಿಜೆಪಿ ಶಾಸಕ ಹಾಗೂ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಅವರು ಡಿಹೆಚ್ ಒ ಡಾ.ಪಾಲಾಕ್ಷ ಜೊತೆಗೆ ಮಾತನಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
“ನಾನು ಇಲ್ಲಿ ಆಸ್ಪತ್ರೆ ಮಾಡೋದಿಲ್ಲ, ನನಗೆ ಅದು ಅವಶ್ಯಕತೆ ಇಲ್ಲ. ಸಾಯೋರು ಎಲ್ಲಾದರೂ ಸಾಯಲಿ” ಎಂದು ಚಂದ್ರಪ್ಪ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಹೊಳಲ್ಕೆರೆ ಪಟ್ಟಣದ ಪ್ರವಾಸಿ ಮಂದಿರ ಬಳಿ ಶಾಸಕರು ಹಾಗೂ ಡಿಎಚ್‌ಒ ನಡುವೆ ಈ ವಾಗ್ವಾದ ನಡೆದಿದೆ ಎಂದು ಹೇಳಲಾಗಿದೆ.
ಹೊಳಲ್ಕೆರೆ ತಾಲೂಕು ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಬೆಡ್ ಕೊವಿಡ್ ವಾರ್ಡ್ ನಿರ್ಮಾಣ ಮಾಡುವಂತೆ ಸೂಚಿಸಲಾಗಿತ್ತು. ಆದರೆ, ಕೇವಲ 10 ಆಕ್ಸಿಜನ್ ಬೆಡ್ ನಿರ್ಮಾಣ ಮಾಡಿರುವುದಾಗಿ ಡಿಹೆಚ್ ಓ ಮಾಹಿತಿ ನೀಡಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, 50 ಆಕ್ಸಿಜನ್ ಬೆಡ್ ನಿರ್ಮಿಸಿ ಇಲ್ಲವಾದರೆ ಏನೂ ಬೇಡ ಎಂದಿದ್ದಾರೆ ಎಂದು ಹೇಳಲಾಗಿದೆ. ಆದರೆ ಎಲ್ಲಾದರೂ ಹೋಗಿ ಸಾಯಲಿ ಎಂಬ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.